ಬೈಕ್‌ನಲ್ಲಿ ಬಂದ ಇಬ್ಬರು… ಮನೆಯಲ್ಲಿದ್ದ ಬಾಲಕನಿಗೆ ಇಂಜೆಕ್ಷನ್ ಹಾಕಿ ಪರಾರಿ!

ಮನೆಯಲ್ಲಿದ್ದ ಬಾಲಕನಿಗೆ ಅಪರಿಚಿತರು ಇಂಜೆಕ್ಷನ್ ಚುಚ್ಚಿದರೆಂಬ ಆರೋಪ ಕೇಳಿಬಂದಿದ್ದು, ಧಾರವಾಡ ಜಿಲ್ಲೆಯ ನೆಲಗುಡ್ಡ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ 11 ವರ್ಷದ ಬಾಲಕನೊಬ್ಬನಿಗೆ ಅಪರಿಚಿತರು ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಆರೋಪ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಮಣಿಕಂಠ ಗಾಣಿಗೇರ ಎಂಬ ಬಾಲಕ ಈಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.

ಬಾಲಕ ನೀಡಿರುವ ಮಾಹಿತಿಯ ಪ್ರಕಾರ, ಆತ ಮನೆಯಲ್ಲಿ ಒಬ್ಬನೇ ಆಟವಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ತಂದೆ-ತಾಯಿ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಏಕಾಏಕಿ ಹಿಡಿದು ಎಡಗೈಗೆ ಇಂಜೆಕ್ಷನ್ ನೀಡಿದರೆಂದು ಬಾಲಕ ಹೇಳಿದ್ದಾನೆ. ಘಟನೆಯ ನಂತರ ಕೆಲ ಹೊತ್ತು ತಾನು ಮೂರ್ಛೆಗೊಂಡಿದ್ದೆ ಎಂದು ಕೂಡ ಆತ ಹೇಳಿದ್ದಾನೆ.

ಸಂಜೆ ಹೊಲದಿಂದ ಮನೆಗೆ ಮರಳಿದ ಪೋಷಕರಿಗೆ ಮಣಿಕಂಠ ಘಟನೆ ವಿವರಿಸಿದ್ದಾನೆ. ಇದರಿಂದ ಆತಂಕಗೊಂಡ ಕುಟುಂಬದವರು ಮೊದಲು ಗ್ರಾಮದ ಇತರ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಆದರೆ ಗ್ರಾಮದಲ್ಲಿ ಬೇರೆ ಯಾರಿಗೂ ಇಂತಹ ಅನುಭವವಾಗಿಲ್ಲ ಎಂಬುದು ತಿಳಿದುಬಂದಿದೆ. ಬಳಿಕ ಬಾಲಕನನ್ನು ಕುಂದಗೋಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ಹೆಚ್ಚಿನ ಪರೀಕ್ಷೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.

ಈ ಘಟನೆ ಬಗ್ಗೆ ಗ್ರಾಮದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಬಾಲಕ ಸ್ಪಷ್ಟವಾಗಿ ಇಂಜೆಕ್ಷನ್ ಮಾಡಲಾಗಿದೆ ಎಂದು ಹೇಳುತ್ತಿದ್ದರೂ, ಘಟನೆಯನ್ನು ಯಾರೂ ನೋಡಿಲ್ಲ. ಜೊತೆಗೆ ಬಾಲಕನ ಕೈ ಮೇಲೆ ಸ್ಪಷ್ಟವಾದ ಸೂಜಿ ಗುರುತು ಕೂಡ ಕಾಣಿಸಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.

ಮಣಿಕಂಠನ ತಾಯಿ ಸುಜಾತಾ ಮಾತನಾಡಿ, “ನಮ್ಮ ಮಗನನ್ನು ಹಲವು ಬಾರಿ ಕೇಳಿದರೂ ಆತ ಅದೇ ಮಾತನ್ನು ಹೇಳುತ್ತಿದ್ದಾನೆ. ಅದಕ್ಕಾಗಿಯೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಕಿಮ್ಸ್ ವೈದ್ಯರು ಬಾಲಕನ ಆರೋಗ್ಯದಲ್ಲಿ ಯಾವುದೇ ಗಂಭೀರ ಬದಲಾವಣೆಗಳು ಕಾಣಿಸಿಲ್ಲ ಎಂದು ಹೇಳಿದ್ದಾರೆ. ರಕ್ತ ಪರೀಕ್ಷೆ ಹಾಗೂ ಎಕ್ಸ್‌ರೇ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ವರದಿ ಬಂದ ನಂತರವೇ ನಿಜಾಂಶ ಸ್ಪಷ್ಟವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ಕುರಿತು ಕುಂದಗೋಳ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕನ ಹೇಳಿಕೆ, ವೈದ್ಯಕೀಯ ವರದಿ ಹಾಗೂ ಸುತ್ತಮುತ್ತಲಿನ ಮಾಹಿತಿ ಆಧರಿಸಿ ಸತ್ಯಾಸತ್ಯತೆ ಪತ್ತೆಹಚ್ಚಲು ಮುಂದಾಗಿದ್ದಾರೆ. ಈ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪೋಷಕರ ಆತಂಕವನ್ನು ಹೆಚ್ಚಿಸಿದೆ. ಮಕ್ಕಳು ಒಬ್ಬರೇ ಹೊರಗೆ ಹೋಗದಂತೆ ಕುಟುಂಬಗಳು ಎಚ್ಚರಿಕೆ ವಹಿಸುತ್ತಿವೆ.

Exit mobile version