ಬೆಂಗಳೂರು : ರಾಜ್ಯದಲ್ಲಿ ದಿನಬಳಕೆಯ ಅಗತ್ಯ ಆಹಾರ ಪದಾರ್ಥಗಳ ಬೆಲೆ ದಿಢೀರನೆ ಏರಿಕೆಯಾಗಿದ್ದು, ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ. ಬೆಣ್ಣೆ , ತುಪ್ಪದ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಈಗ ಅಕ್ಕಿ, ಬೇಳೆಕಾಳು, ಮಸಾಲೆ ಪದಾರ್ಥಗಳು ಹಾಗೂ ಡ್ರೈಫ್ರೂಟ್ಸ್ ದರ ನಿರಂತರವಾಗಿ ಹೆಚ್ಚುತ್ತಿದ್ದು, ಮಧ್ಯಮ ವರ್ಗದ ಸಂಸಾರದ ಬಜೆಟ್ ಸಂಪೂರ್ಣವಾಗಿ ತಲೆಕೆಳಗಾಗಿದೆ.
ಪ್ರಮುಖವಾಗಿ ಅಡುಗೆ ಮನೆಯಲ್ಲಿ ದಿನವೂ ಬಳಸುವ ಮಸಾಲೆ ಪದಾರ್ಥಗಳ ಬೆಲೆ ದಾಖಲೆ ಬರೆದಿದೆ. ಕೆಲವು ತಿಂಗಳ ಹಿಂದಷ್ಟೇ ಪ್ರತಿ ಕೆ.ಜಿ.ಗೆ ₹2,800 ರಷ್ಟಿದ್ದ ಏಲಕ್ಕಿ ದರವು ಈಗ ಭಾರಿ ಜಿಗಿತ ಕಂಡು ₹4,000ರ ಗಡಿಯನ್ನು ತಲುಪಿದೆ. ಇದರೊಂದಿಗೆ ಜೀರಿಗೆ ಪ್ರತಿ ಕೆ.ಜಿ.ಗೆ ₹300, ಕೊತ್ತಂಬರಿ ₹310 ಹಾಗೂ ಸಾಸಿವೆ ದರ ₹120ಕ್ಕೆ ತಲುಪಿದೆ. ನಿತ್ಯದ ಅಡುಗೆಗೆ ಅತ್ಯಗತ್ಯವಾದ ತೊಗರಿ ಬೇಳೆ ₹130 ಹಾಗೂ ಉದ್ದಿನ ಬೇಳೆ ₹145ಕ್ಕೆ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗಷ್ಟೇ ನಂದಿನಿ ತುಪ್ಪ ಮತ್ತು ಬೆಣ್ಣೆ ದರ ಹೆಚ್ಚಳವಾಗಿ ಗ್ರಾಹಕರು ಕಂಗಾಲಾಗಿದ್ದರು. ಇದರ ಬೆನ್ನಲ್ಲೇ ಸಕ್ಕರೆ, ಬೆಲ್ಲ, ಹುಣಸೆಹಣ್ಣು ಹಾಗೂ ಬಾದಾಮಿ ಸೇರಿದಂತೆ ಡ್ರೈಫ್ರೂಟ್ಸ್ ಬೆಲೆಯೂ ಹೆಚ್ಚಿರುವುದರಿಂದ ದಿನಸಿ ಖರೀದಿ ಸಂಪೂರ್ಣ ದುಬಾರಿಯಾಗಿದೆ. ಈ ಬಾರಿ ದೇಶದ ಹಲವು ಭಾಗಗಳಲ್ಲಿ ಉಂಟಾದ ಮಳೆ ಕೊರತೆ, ಕೃಷಿ ಇಳುವರಿಯಲ್ಲಿನ ಭಾರಿ ಇಳಿಕೆ ಹಾಗೂ ಸಾಗಾಣಿಕೆ ವೆಚ್ಚದ ಹೆಚ್ಚಳವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಮಾರುಕಟ್ಟೆಯ ತಜ್ಞರು ಮತ್ತು ವ್ಯಾಪಾರಿಗಳು ವಿಶ್ಲೇಷಿಸಿದ್ದಾರೆ.
ಮಾರುಕಟ್ಟೆಯಲ್ಲಿ ಸರಕುಗಳ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿರುವುದರಿಂದ ದರಗಳು ನಿರಂತರವಾಗಿ ಏರುತ್ತಿವೆ. ದಿನಸಿ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರು ತಮ್ಮ ಖರೀದಿ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದು, ಇದು ಸಣ್ಣ ವ್ಯಾಪಾರಿಗಳ ವಹಿವಾಟಿನ ಮೇಲೂ ಕೆಟ್ಟ ಪರಿಣಾಮ ಬೀರಿದೆ.
ಮುಂಬರುವ ಹಬ್ಬಗಳ ದಿನಗಳಲ್ಲಿ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದ್ದು, ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಬೆಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
Price Hike Shock cardamom hike 4000 Ghee Butter Price Soars
