5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ

Shirahatti BJP MLA Dr Chandru Lamani | Lokayukta Raid: ಗದಗ: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಸಮರ ಮುಂದುವರೆದಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಕ್ಷ್ಮೇಶ್ವರದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಶಾಸಕರೊಂದಿಗೆ ಅವರ ಇಬ್ಬರು ಆಪ್ತ ಸಹಾಯಕರು (PA) ಕೂಡ ಸಿಕ್ಕಿಬಿದ್ದಿದ್ದಾರೆ.

ಘಟನೆಯ ಹಿನ್ನೆಲೆ:

ಸಣ್ಣ ನೀರಾವರಿ ಇಲಾಖೆಯ ಕ್ಲಾಸ್ 1 ಗುತ್ತಿಗೆದಾರ ವಿಜಯ್ ಎಂಬುವವರಿಗೆ ರಸ್ತೆ ಬದಿಯ ತಡೆಗೋಡೆ ನಿರ್ಮಾಣದ ಕಾಮಗಾರಿ ವಹಿಸಲು ಶಾಸಕರು ಕಮಿಷನ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಒಟ್ಟು 11 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದ್ದು, ಮುಂಗಡವಾಗಿ 5 ಲಕ್ಷ ರೂ. ಸ್ವೀಕರಿಸುವಾಗ ಶಾಸಕ ಚಂದ್ರು ಲಮಾಣಿ, ಅವರ ಪಿಎಗಳಾದ ಮಂಜುನಾಥ್ ಮತ್ತು ಗುರು ಅವರನ್ನು ಲೋಕಾಯುಕ್ತ ಎಸ್​ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ವಶಕ್ಕೆ ಪಡೆದಿದೆ.

ಯಾರು ಈ ಸ್ನೇಹಮಯಿ ಕೃಷ್ಣ? ಮುಡಾ ದೂರುದಾರನ ಬಂಧನಕ್ಕೆ ಕಾರಣವಾದ ಆ ಆಡಿಯೋ ರಹಸ್ಯವೇನು?

ಆಸ್ಪತ್ರೆ ಮೇಲೂ ದಾಳಿ:

ಲಂಚದ ಹಣ ಪಡೆಯುತ್ತಿದ್ದ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಶಾಸಕರಿಗೆ ಸೇರಿದ ಬಾಲಾಜಿ ಆಸ್ಪತ್ರೆ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಶಾಸಕರು ಮತ್ತು ಅವರ ಸಹಚರರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಶಾಸಕರೊಬ್ಬರು ಲಂಚ ಪ್ರಕರಣದಲ್ಲಿ ನೇರವಾಗಿ ಸಿಕ್ಕಿಬಿದ್ದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಭ್ರಷ್ಟಾಚಾರದ ವಿರುದ್ಧದ ಈ ಕಾರ್ಯಾಚರಣೆ ಜನಸಾಮಾನ್ಯರಲ್ಲಿ ಲೋಕಾಯುಕ್ತದ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.

Exit mobile version