ಕೇವಲ 50 ಸಾವಿರ ರೂಪಾಯಿಂದ ನೂರಾರು ಕೋಟಿ ಸಾಮ್ರಾಜ್ಯ ಕಟ್ಟಿದ ಕನ್ನಡಿಗ : ಇದು ‘ಕೃಷ್ಣ ಪ್ರಸಾದ್ ಕ್ಯಾಶೂಸ್’ ಯಶೋಗಾಥೆ

ಉಡುಪಿ ಜಿಲ್ಲೆಯ ಕೋಟ ಸಮೀಪದ ವಂಡಾರಿನಲ್ಲಿರುವ ಶ್ರೀ ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿರುವ ಸಂಪತ್‌ ಕುಮಾರ್‌ ಶೆಟ್ಟಿ.

ಸಾಧಿಸುವ ಛಲ, ಕಠಿಣ ಪರಿಶ್ರಮ ಇದ್ದರೆ ಸಾಕು, ಯಾವುದೇ ಬಂಡವಾಳ ಇಲ್ಲದೇ ಇದ್ದರೂ ಸಾಧನೆಯ ಶಿಖರ ಏರಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಕೇವಲ 50 ಸಾವಿರ ರೂಪಾಯಿ ಬಂಡವಾಳದಲ್ಲಿ ಉದ್ಯಮವನ್ನು ಆರಂಭಿಸಿ ಇಂದು ನೂರಾರು ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದಾರೆ. ಅವರು ಬೇರಾರೂ ಅಲ್ಲಾ, ಉಡುಪಿ ಜಿಲ್ಲೆಯ ಕೋಟ ಸಮೀಪದ ವಂಡಾರಿನಲ್ಲಿರುವ ಶ್ರೀ ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ನ (Shree Krishna prasad Cashews Pvt LTD)  ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿರುವ ಸಂಪತ್‌ ಕುಮಾರ್‌ ಶೆಟ್ಟಿ (Sampath Kumar Shetty).

2012ರಲ್ಲಿ ಕೇವಲ 60 ಸೆಂಟ್ಸ್‌ ಜಾಗದಲ್ಲಿ ಸಣ್ಣದಾಗಿ ಗೇರುಬೀಜ ಸಂಸ್ಕರಣಾ ಘಟಕ ಆರಂಭಿಸಿದ್ದ ಸಂಪತ್‌ ಕುಮಾರ್‌ ಶೆಟ್ಟಿ ಅವರು ಇಂದು ಶ್ರೀ ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ ಅನ್ನು ಏಷ್ಯಾದ ಅತೀ ದೊಡ್ಡ ಗೇರು ಸಂಸ್ಕರಣಾ ಘಟಕವಾಗಿ ಬೆಳೆಸಿ ನಿಲ್ಲಿಸಿದ್ದಾರೆ. ಉದ್ಯಮದಲ್ಲಿ ಸೋಲು ಗೆಲುವುಗಳನ್ನು ಕಂಡು ಇಂದು, ಸಕ್ಸಸ್‌ಪುಲ್‌ ಉದ್ಯಮಿಯಾಗಿ ಬೆಳೆದು ನಿಂತಿರುವ ಸಂಪತ್‌ ಕುಮಾರ್‌ ಶೆಟ್ಟಿ ಅವರ ಯಶೋಗಾಥೆಯನ್ನು ನ್ಯೂಸ್‌ನೆಕ್ಸ್ಟ್‌ ನಿಮ್ಮ ಮುಂದೆ ತೆರೆದು ಇಟ್ಟಿದೆ.

ಆರಂಭಿಕ ದಿನಗಳ ಕಠಿಣ ಹೋರಾಟ

2012ರಲ್ಲಿ ಉಡುಪಿ ಜಿಲ್ಲೆಯ ವಂಡಾರು ಅನ್ನೋ ಪುಟ್ಟ ಗ್ರಾಮದಲ್ಲಿ ಕೇವಲ 60 ಸೆಂಟ್ಸ್ ಜಾಗದಲ್ಲಿ ಸಣ್ಣದಾಗಿ ಶ್ರೀಕೃಷ್ಣ ಪ್ರಸಾದ್‌ ಕ್ಯಾಶ್ಯೂಸ್‌ ಅನ್ನೋ ಕಾರ್ಖಾನೆ ಆರಂಭವಾಯಿತು. ಆರಂಭಿಕ ದಿನಗಳು ಸುಲಭವಾಗಿರಲಿಲ್ಲ. ವಾರಾಂತ್ಯದಲ್ಲಿ ಕಾರ್ಮಿಕರಿಗೆ ವೇತನ ಕೊಡುವುದಕ್ಕೂ ಹಣ ಇರಲಿಲ್ಲ. ಸ್ನೇಹಿಯರು, ಪರಿಚಯಸ್ಥರ ಬಳಿಯಲ್ಲಿ ಸಾಲ ಪಡೆದು ಸಂಸ್ಥೆಯನ್ನು ಮುನ್ನೆಡೆಸುವ ಸ್ಥಿತಿ ಅವರದ್ದಾಗಿತ್ತು.

ಆದರೆ ಅಂದು ಕೇವಲ 100 ಗೋಣಿ ಗೇರು ಬೀಜ ಸಂಸ್ಕರಣೆಯ ಕನಸು ಕಂಡಿದ್ದ ಸಂಪತ್‌ ಕುಮಾರ್‌ ಶೆಟ್ಟಿ ಅವರ ಮಾಲೀಕತ್ವದ ಶ್ರೀ ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಇಂದು ಪ್ರತಿನಿತ್ಯ 150 ರಿಂದ 200 ಟನ್ ಗೇರುಬೀಜ ಸಂಸ್ಕರಿಸುವ ಬೃಹತ್ ಸಾಮರ್ಥ್ಯ ಉದ್ಯಮವಾಗಿ ಬೆಳೆದುನಿಂತಿದೆ. ಅಂದು ತನ್ನ ಕಷ್ಟದಲ್ಲಿ ಸಹಾಯ ಮಾಡಿದ ಪ್ರತಿಯೊಬ್ಬರನ್ನೂ ಸಂಪತ್ ಕುಮಾರ್‌ ಶೆಟ್ಟಿ ಅವರು ಇಂದಿಗೂ ಸ್ಮರಿಸುತ್ತಾರೆ.

ಆಫ್ರಿಕಾದಿಂದ ಆಮದು, ಶೂನ್ಯ ತ್ಯಾಜ್ಯ ತಂತ್ರಜ್ಞಾನ

ವಂಡಾರಿನಲ್ಲಿ ಗೇರು ಬೀಜ ಕಟ್ಟಿಂಗ್‌ ಘಟಕದ ಜೊತೆಗೆ ಬ್ರಹ್ಮಾವರ ಹಾಗೂ ವಂಡಾರಿನಲ್ಲಿ ಕಟ್ಟಿಂಗ್‌ ಆಗಿರುವ ಗೇರು ಬೀಜವನ್ನು ಸಂಪೂರ್ಣವಾಗಿ ಸಂಸ್ಕರಿಸುವ ಯೂನಿಟ್‌ ಕೂಡ ಹೊಂದಿದ್ದಾರೆ. ಶ್ರೀ ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ ಸಂಸ್ಥೆ ಅಗತ್ಯವಿರುವ ಕಚ್ಚಾ ಗೇರುಬೀಜಗಳನ್ನು ನೇರವಾಗಿ ದಕ್ಷಿಣ ಆಫ್ರಿಕಾದಿಂದ ಕಂಟೇನರ್ ಮುಖಾಂತರ ಆಮದು ಮಾಡಿಕೊಳ್ಳುತ್ತಿದೆ. ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಬಾಯ್ಲಿಂಗ್, ಕಟಿಂಗ್, ಪೀಲಿಂಗ್ ಮತ್ತು ಗ್ರೇಡಿಂಗ್ ಪ್ರಕ್ರಿಯೆಗಳು ನಡೆಯುತ್ತದೆ.

ಸಂಪತ್‌ ಕುಮಾರ್‌ ಅವರ ಶೆಟ್ಟಿ ಅವರ ದೂರದೃಷ್ಟಿ ಪರಿಕಲ್ಪನೆಯಿಂದಾಗಿ ಶ್ರೀ ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ ‘ಶೂನ್ಯ ತ್ಯಾಜ್ಯ’ (Zero Waste) ವಿಧಾನವನ್ನು ಅಳವಡಿಸಿಕೊಂಡಿದ್ದು, ಗೋಡಂಬಿ ಸಿಪ್ಪೆಯನ್ನು ಎಣ್ಣೆಯಾಗಿ ಪರಿವರ್ತಿಸುವ ಜೊತೆಗೆ ಎಣ್ಣೆ ತೆಗೆದ ಸಿಪ್ಪೆಯನ್ನು ಬಾಯ್ಲರ್‌ ಯಂತ್ರಗಳಿಗೆ ಉರುವಲಾಗಿ ಬಳಕೆ ಮಾಡಲಾಗುತ್ತಿದೆ.

ಗೋಡಂಬಿ ಉದ್ಯಮದಲ್ಲಿ ಸಂಪತ್‌ ಶೆಟ್ಟಿ ಅವರು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಅದ್ರಲ್ಲೂ ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ನಲ್ಲಿ ಕಾಫಿ ಬೀಜಗಳನ್ನು ವಿಂಗಡಿಸುವ ತಂತ್ರಜ್ಞಾನದಿಂದ ಪ್ರೇರಣೆಗೊಂಡು, ಗೋಡಂಬಿಗಳನ್ನು ಗಾತ್ರ ಮತ್ತು ಬಣ್ಣದ ಆಧಾರದ ಮೇಲೆ ಸುಮಾರು 62 ವಿಭಿನ್ನ ಗ್ರೇಡ್‌ಗಳಲ್ಲಿ ವಿಂಗಡಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನ ಗೋಡಂಬಿ ಉದ್ಯಮದಲ್ಲಿ ಬಳಕೆ ಆಗ್ತಾ ಇರೋದು ದೇಶದಲ್ಲಿಯೇ ಪ್ರಥಮ.

ಮಹಿಳಾ ಸಬಲೀಕರಣ, ಸಾವಿರಾರು ಮಂದಿಗೆ ಉದ್ಯೋಗದಾತ

ಮಂಗಳೂರು, ಬೆಂಗಳೂರಿನಂತೆ ಮಹಾನಗರಗಳಲ್ಲಿ ಸಿಗುವ ಉದ್ಯೋಗವನ್ನು ತಮ್ಮ ಊರಲ್ಲೇ ಸೃಷ್ಟಿಸಿದ ಹೆಗ್ಗಳಿಕೆ ಸಂಪತ್‌ ಕುಮಾರ್‌ ಶೆಟ್ಟಿ ಅವರದ್ದು. ಶ್ರೀಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಲ್ಲಿ 3000 ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದು, ಇದರಲ್ಲಿ ಬಹುಪಾಲು ಮಹಿಳೆಯರು ಗ್ರಾಮೀಣ ಭಾಗದವರೇ ಆಗಿದ್ದಾರೆ.

ಕಾರ್ಖಾನೆಗೆ ಬರಲು ಸಾಧ್ಯವಾಗ ಮಹಿಳೆಯರ ಮನೆಗೆ ಗೇರು ಬೀಜಗಳನ್ನು ಕಳುಹಿಸಿ, ಸಿಪ್ಪೆ ಸುಲಿಯುವ ಕೆಲಸ ನೀಡುವ ಮೂಲಕ ಆರ್ಥಿಕವಾಗಿ ಸ್ವಾವಲಂಭಿಯನ್ನಾಗಿಸಿದ್ದಾರೆ. ಕಾರ್ಮಿಕರ ಭದ್ರತೆಗಾಗಿ ಕಾರ್ಮಿಕರಿಗೆ ಪಿಎಫ್ (PF), ಇಎಸ್ಐ (ESI) ನಂತಹ ಕಾರ್ಪೊರೇಟ್ ಮಟ್ಟದ ಸೌಲಭ್ಯಗಳನ್ನೂ ಒದಗಿಸಲಾಗಿದೆ.

ವರ್ಷಂಪ್ರತಿ ಉದ್ಯೋಗಿಗಳಿಗೆ ಕಾರು, ಚಿನ್ನದ ಉಡುಗೊರೆ

ಸಂಪತ್‌ ಕುಮಾರ್‌ ಶೆಟ್ಟಿ ಅವರ ಯಶಸ್ಸಿನ ಗುಟ್ಟು ಅವರು ಕಾರ್ಮಿಕರ ಜೊತೆಗಿನ ಒಡನಾಟ. ಸಂಸ್ಥೆಯಲ್ಲಿ ಕಾರ್ಮಿಕರ ಜೊತೆಗೆ ತಾನೊಬ್ಬ ಮಾಲೀಕ ಅನ್ನೋದನ್ನೂ ಮರೆತು ಕಾರ್ಮಿಕರ ರೀತಿಯಲ್ಲಿಯೇ ದುಡಿಯುತ್ತಿದ್ದಾರೆ. ಶ್ರೀ ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ನ ಕ್ಯಾಟಿಂಗ್‌ನಲ್ಲಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರ್ಮಿಕರು ಬೇಕಾದಷ್ಟು ಊಟ ಮಾಡುವ ಉಚಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ನೂರಾರು ಕೋಟಿ ರೂಪಾಯಿ ಒಡೆಯರಾಗಿದ್ದರೂ ಕೂಡ ಸಂಪತ್‌ ಕುಮಾರ್‌ ಶೆಟ್ಟಿ ಅವರು ಕಾರ್ಮಿಕರ ಜೊತೆಯಲ್ಲೇ ಕುಳಿತು ಊಟ ಮಾಡ್ತಾರೆ. ಅಷ್ಟೇ ಅಲ್ಲಾ ಸಂಸ್ಥೆಯ ಏಳಿಗೆಗಾಗಿ ದುಡಿಯುವ ಕಾರ್ಮಿಕರಿಗೆ ವರ್ಷಂಪ್ರತಿ ಕಾರು, ಚಿನ್ನಾಭರಣಗಳನ್ನು ನೀಡುತ್ತಿದ್ದಾರೆ. ವರ್ಷಂಪ್ರತಿ ಒಟ್ಟು 5 ಮಂದಿಯನ್ನು ಆಯ್ಕೆ ಮಾಡಿ, ಮೂವರಿಗೆ ಕಾರುಗಳನ್ನು ಗಿಫ್ಟ್‌ ನೀಡಿದ್ರೆ, ಇಬ್ಬರು ಮಹಿಳಾ ಕಾರ್ಮಿಕರಿಗೆ ಚಿನ್ನಾಭರಣದ ಉಡುಗೊರೆಯನ್ನು ನೀಡುತ್ತಾರೆ. ಈ ಮೂಲಕ ಮಾಲೀಕ- ಕಾರ್ಮಿಕರ ಸಂಬಂಧಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

ಗುಣಮಟ್ಟದಲ್ಲಿ ರಾಜಿಯೇ ಇಲ್ಲ

ಇಲ್ಲಿ ತಯಾರಾಗುವ ಗೋಡಂಬಿಗಳು ಡಬ್ಲ್ಯೂ 180 (W180), ಡಬ್ಲ್ಯೂ 240, ಡಬ್ಲ್ಯೂ 320 ಹೀಗೆ ನಾನಾ ವಿಭಾಗಗಳಲ್ಲಿ ಗ್ರೇಡ್ ಆಗಿ ಪ್ಯಾಕ್ ಆಗುತ್ತವೆ. ಫಂಗಸ್ ಬರದಂತೆ ಕಾರ್ಬನ್ ಡೈಆಕ್ಸೈಡ್ ಬಳಸಿ ಏರ್-ಟೈಟ್ (Air-tight) ಪ್ಯಾಕಿಂಗ್ ಮಾಡಲಾಗುತ್ತದೆ. ಗುಣಮಟ್ಟದ ಕಟ್ಟುನಿಟ್ಟಿನ ಪರೀಕ್ಷೆಯ ನಂತರವಷ್ಟೇ ದುಬೈ, ಕತಾರ್ ಸೇರಿದಂತೆ ಅರಬ್ ರಾಷ್ಟ್ರಗಳು, ಯುರೋಪ್ ಹಾಗೂ ಜಪಾನ್‌ಗೂ ಇವರ ಗೋಡಂಬಿ ರಫ್ತಾಗುತ್ತಿದೆ. ಗುಣಮಟ್ಟದ ಕಾರಣದಿಂದಾಗಿಯೇ ದೇಶೀಯ ಮಾರುಕಟ್ಟೆಯಲ್ಲೂ ‘ಕೃಷ್ಣ ಪ್ರಸಾದ್’ ಬ್ರಾಂಡ್ ಮುಂಚೂಣಿಯಲ್ಲಿದೆ.

ಬರೀ ಲಾಭ ಗಳಿಸುವುದಷ್ಟೇ ವ್ಯಾಪಾರವಲ್ಲ, ಸಮಾಜದ ಏಳಿಗೆ ಮತ್ತು ಕಾರ್ಮಿಕರ ಕಲ್ಯಾಣವೂ ಮುಖ್ಯ ಎಂಬುದನ್ನು ಸಂಪತ್ ಕುಮಾರ್ ಶೆಟ್ಟಿ ಸಾಧಿಸಿ ತೋರಿಸಿದ್ದಾರೆ. ಬಡತನದಿಂದ ಬಂದು ನೂರಾರು ಕೋಟಿ ಸಾಮ್ರಾಜ್ಯ ಕಟ್ಟಿದರೂ ಮಣ್ಣಿನ ಗುಣ ಮರೆಯದ ಇವರ ಈ ಕಥೆ, ಇಂದಿನ ಯುವಜನತೆಗೆ ನಿಜಕ್ಕೂ ಒಂದು ದೊಡ್ಡ ಸ್ಫೂರ್ತಿ.

ಈ ಕಾರ್ಖಾನೆಯಲ್ಲಿ ಗೋಡಂಬಿ ಸಂಸ್ಕರಣೆ ಹೇಗೆ ನಡೆಯುತ್ತದೆ ? ಅನ್ನೋದನನ್ನೂ ನೋಡಲು ಈ ವಿಡಿಯೋ ನೋಡಿ.

SKP Cashews From 50,000 to a Multi-Crore Empire The Inspiring Story of Sampath Kumar Shetty and Shree Krishna prasad Cashews

Exit mobile version