Zomato : ಜೊಮ್ಯಾಟೋಗೆ ಭಾರೀ ದಂಡ : ವೆಜ್ ಬರ್ಗರ್ ಆರ್ಡರ್ ಮಾಡಿದವನಿಗೆ ಚಿಕನ್ ಬರ್ಗರ್

ಗ್ರಾಹಕನಿಗೆ ಉಂಟುಮಾಡಿದ ಮಾನಸಿಕ ಹಿಂಸೆ ಮತ್ತು ಸೇವಾ ನ್ಯೂನತೆಗಾಗಿ ಜಂಟಿಯಾಗಿ 20,000 ರೂಪಾಯಿ ಪರಿಹಾರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10,000 ರೂಪಾಯಿಗಳನ್ನು ಪಾವತಿಸುವಂತೆ ನ್ಯಾಯಾಲಯ ಕಡಕ್ ಆದೇಶ ನೀಡಿದೆ.

Zomato : ಬೆಂಗಳೂರು : ಪವಿತ್ರ ಹಬ್ಬದ ದಿನದಂದು ಸಸ್ಯಾಹಾರಿ ಗ್ರಾಹಕರೊಬ್ಬರಿಗೆ ಮಾಂಸಾಹಾರಿ ಆಹಾರವನ್ನು ಪೂರೈಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ ಹಾಗೂ ಸ್ಥಳೀಯ ಹೋಟೆಲ್ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರಿ ದಂಡ ವಿಧಿಸಿದೆ.

ಗ್ರಾಹಕನಿಗೆ ಉಂಟುಮಾಡಿದ ಮಾನಸಿಕ ಹಿಂಸೆ ಮತ್ತು ಸೇವಾ ನ್ಯೂನತೆಗಾಗಿ ಜಂಟಿಯಾಗಿ 20,000 ರೂಪಾಯಿ ಪರಿಹಾರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10,000 ರೂಪಾಯಿಗಳನ್ನು ಪಾವತಿಸುವಂತೆ ನ್ಯಾಯಾಲಯ ಕಡಕ್ ಆದೇಶ ನೀಡಿದೆ.

ಶಿವಮೊಗ್ಗ ನಗರದ ಜೆ.ಪಿ.ಎನ್ ರಸ್ತೆಯ ನಿವಾಸಿಯಾದ ನಂದೀಶ್ ಎಂಬುವವರು ಕಳೆದ ಗಣೇಶ ಹಬ್ಬದ ಪವಿತ್ರ ದಿನದಂದು ಜೊಮ್ಯಾಟೊ ಆಪ್ ಮೂಲಕ ವೆಜ್​ ಬರ್ಗರ್ ಆರ್ಡರ್ ಮಾಡಿದ್ದರು. ಹಬ್ಬದ ಪ್ರಯುಕ್ತ ಸಂಪೂರ್ಣ ಉಪವಾಸವಿದ್ದು ಪೂಜೆ ಮುಗಿಸಿದ ನಂತರ ಸಸ್ಯಾಹಾರಿ ಆಹಾರ ಸೇವಿಸುವುದು ಅವರ ಉದ್ದೇಶವಾಗಿತ್ತು. ಆದರೆ, ಜೊಮೆಟೋ ಮತ್ತು ಶಿವಮೊಗ್ಗದ ‘ಫೈವ್ ಸ್ಟಾರ್’ ಹೋಟೆಲ್ ಜಂಟಿಯಾಗಿ ಎಸಗಿದ ಎಡವಟ್ಟಿನಿಂದಾಗಿ ಅವರಿಗೆ ಮಾಂಸಾಹಾರಿ ಬರ್ಗರ್ ತಲುಪಿಸಲಾಗಿತ್ತು.

ತಮ್ಮ ಮನೆಯೊಳಗೆ ಹಬ್ಬದ ದಿನವೇ ಮಾಂಸಾಹಾರ ತಲುಪಿಸಿದ್ದರಿಂದ ತೀವ್ರ ಬೇಸರಗೊಂಡ ನಂದೀಶ್, ತಕ್ಷಣವೇ ಜೊಮ್ಯಾಟೊ ಸಂಸ್ಥೆಗೆ ದೂರು ನೀಡಿದ್ದರು. ಆದರೆ ಸಂಸ್ಥೆಯು ಕೇವಲ ಬರ್ಗರ್‌ನ ಮೊತ್ತವನ್ನು ಮಾತ್ರ ಮರುಪಾವತಿಸಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತ್ತು. ಇದರಿಂದ ತೃಪ್ತರಾಗದ ಗ್ರಾಹಕರು ತಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಕ್ಕಾಗಿ ನ್ಯಾಯ ಕೋರಿ ಶಿವಮೊಗ್ಗದ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.

ದೂರಿನ ವಾದ-ಪ್ರತಿವಾದಗಳನ್ನು ಆಲಿಸಿದ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯ ಯೋಗಾನಂದ ಭಾಂಡ್ಯ ಅವರಿದ್ದ ಪೀಠವು, ಹಣ ಮರುಪಾವತಿಸುವುದರಿಂದ ಗ್ರಾಹಕರಿಗಾದ ಮಾನಸಿಕ ಆಘಾತಕ್ಕೆ ಪರಿಹಾರ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಆಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿ ಸಾಬೀತಾದ ಹಿನ್ನೆಲೆಯಲ್ಲಿ ಗ್ರಾಹಕನಿಗೆ ಸೂಕ್ತ ದಂಡದ ಮೊತ್ತವನ್ನು ಪಾವತಿಸುವಂತೆ ಸೂಚಿಸಿದೆ. ಆನ್‌ಲೈನ್ ಆಹಾರ ಸಂಸ್ಥೆಗಳು ಗ್ರಾಹಕರ ನಂಬಿಕೆ ಹಾಗೂ ಸುರಕ್ಷತೆಯೊಂದಿಗೆ ಆಟವಾಡಬಾರದು ಎಂಬ ಎಚ್ಚರಿಕೆಯನ್ನು ಈ ತೀರ್ಪು ನೀಡಿದೆ.

Zomato fined for delivering chicken burger instead of veg burger

Exit mobile version