News Next Kannada

lifestyle

ಕೇವಲ ತುಪ್ಪ, ಬೆಲ್ಲ, ಗೋಧಿ ಹಿಟ್ಟು ಸಾಕು: ಶ್ರಾವಣ ಮಾಸದ ಹಬ್ಬಗಳ ಆಚರಣೆಗೆ ಈ ಸಿಹಿ ತಿಂಡಿ ಟ್ರೈ ಮಾಡಿ!

ಕೇವಲ ಮೂರೇ ಮೂರು ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಈ ಸಿಹಿ ತಿನಿಸನ್ನು ವಾರದವರೆಗೆ ಇಟ್ಟುಕೊಳ್ಳಬಹುದು. ಗೋಧಿ ಹಿಟ್ಟು, ತುಪ್ಪ ಮತ್ತು ಬೆಲ್ಲದಿಂದ ತಯಾರಿಸಬಹುದಾದ ಬರ್ಫಿ ರೆಸಿಪಿ ಇಲ್ಲಿದೆ.

By Archana V Bhat
Wheat Burfi

ಈಗ ಶ್ರಾವಣ ಮಾಸದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ಸಾಲು ಸಾಲು ಹಬ್ಬಗಳ ಆಚರಣೆಯೂ ಜೋರಾಗಿದೆ. ಹಬ್ಬಗಳ ಆಚರಣೆ ಎಂದ ಮೇಲೆ ಸಿಹಿ ತಿಂಡಿ ಇರಲೇಬೇಕು. ಪ್ರತಿ ಹಬ್ಬಕ್ಕೂ ಒಂದೇ ರೀತಿಯ ಸಿಹಿ ತಿಂಡಿಗಳನ್ನು ಮಾಡೋದಕ್ಕಿಂತ ಬೇರೆ ಬೇರೆ ಸಿಹಿ ಖಾದ್ಯಗಳನ್ನು ಮಾಡಿದ್ರೆ ಹಬ್ಬದ ಆಚರಣೆ ಇನ್ನಷ್ಟು ವಿಶೇಷವಾಗಿರುತ್ತದೆ. ಇದರಿಂದ ಮನೆಮಂದಿಗೆಲ್ಲ ಸಂತೋಷವೂ ಆಗುತ್ತದೆ. ಕಡಿಮೆ ಸಮಯದಲ್ಲಿ ರುಚಿಯಾದ ಸಿಹಿ ತಯಾರಿಸಬೇಕೆಂದರೆ ಈ ಬರ್ಫಿ ಟ್ರೈ ಮಾಡಬಹುದು. ಕೇವಲ ಮೂರೇ ಮೂರು ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದಾದ ಈ ಸಿಹಿ ತಿನಿಸನ್ನು ವಾರದವರೆಗೆ ಇಟ್ಟುಕೊಳ್ಳಬಹುದು. ಗೋಧಿ ಹಿಟ್ಟು, ತುಪ್ಪ ಮತ್ತು ಬೆಲ್ಲದಿಂದ ತಯಾರಿಸಬಹುದಾದ ಬರ್ಫಿ ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು – 1ಕಪ್‌

ಬೆಲ್ಲ – ಕಾಲು ಕಪ್‌ (ತುರಿದ ಬೆಲ್ಲ)

ತುಪ್ಪ – ಕಾಲು ಕಪ್‌

ಏಲಕ್ಕಿ ಪುಡಿ – 1 ಟೀ ಚಮಚ

ತಯಾರಿಸುವ ವಿಧಾನ

  • ಒಂದು ದಪ್ಪದ ತಳದ ಪ್ಯಾನ್‌ ತೆಗೆದುಕೊಂಡು ಅದಕ್ಕೆ ತಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕರಗಿಸಿ.

  • ಅದಕ್ಕೆ ಗೋಧಿ ಹಿಟ್ಟು ಸೇರಿಸಿ. 15–20 ನಿಮಿಷಗಳ ಕಾಲ ಮಂದ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿದು ಪಕ್ಕಕ್ಕೆ ಇರಿಸಿ.

  • ಅದೇ ಪ್ಯಾನ್‌ಗೆ ಈಗ ಬೆಲ್ಲ ಹಾಕಿ ಸ್ವಲ್ಪ ನೀರು ಸೇರಿಸಿ. ಬೆಲ್ಲ ಕರಗಿದ ನಂತರ ಅದಕ್ಕೆ ಏಲಕ್ಕಿ ಪುಡಿ ಬೆರೆಸಿ. ಪಾಕ ಬರುವವರಗೆ ಕಾಯಿಸಿ.

  • ಸ್ಟವ್‌ನ ಉರಿ ಚಿಕ್ಕದು ಮಾಡಿ, ಅದಕ್ಕೆ ಹುರಿದಿಟ್ಟುಕೊಂಡ ಗೋಧಿ ಹಿಟ್ಟು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ.

  • ಬರ್ಫಿ ಮೌಲ್ಡ್‌ಗೆ ತುಪ್ಪ ಸವರಿ. ಅದಕ್ಕೆ ತಯಾರಾದ ಮಿಶ್ರಣ ಹಾಕಿ. ಚಮಚದ ಸಹಾಯದಿಂದ ಎಲ್ಲ ಕಡೆ ಸಮವಾಗಿ ಹರಡಿ.

  • ಬಿಸಿ ಆರಿದ ನಂತರ ಅದನ್ನು ನಿಮ್ಮಿಷ್ಟದ ಆಕಾರದಲ್ಲಿ ಕತ್ತರಿಸಿ. ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿದರೆ ಎರಡು ವಾರಗಳವರೆಗೆ ಕೆಡದಂತೆ ಇಡಬಹುದು.