Kannada News Next

lifestyle

ಶ್ರೀಕೃಷ್ಣನ ನೈವೇದ್ಯಕ್ಕೆ ಶ್ರೀಖಂಡ : ಸಿಂಪಲ್‌ ಆಗಿ ಹೀಗೆ ತಯಾರಿಸಿ

ಈ ವರ್ಷ ಜನ್ಮಾಷ್ಟಮಿಯನ್ನು ದೇಶಾದ್ಯಂತ ಸೆಪ್ಟೆಂಬರ್‌ 4 ಆಚರಿಸಲಾಗುತ್ತಿದೆ. ಶ್ರೀಕೃಷ್ಣನ ಜನ್ಮದಿನಕ್ಕೆ ಸಿಂಪಲ್‌ ಆಗಿ ಶ್ರೀಖಂಡ ಹೀಗೆ ತಯಾರಿಸಿ.

By Archana V Bhat
Photo: AI

ಶ್ರೀಕೃಷ್ಣನ ಜನ್ಮದಿನವನ್ನು ಭಾರತದಾದ್ಯಂತ ಬಹಳ ಶ್ರದ್ಧಾ–ಭಕ್ತಿಯ ಜೊತೆಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷದ ಜನ್ಮಾಷ್ಟಮಿ ಆಚರಣೆಗೆ ಕೇವಲ ಒಂದು ದಿನ ಮಾತ್ರ ಉಳಿದೆ. ಬಹಳಷ್ಟು ಮನೆಗಳಲ್ಲಿ ಶ್ರೀಕೃಷ್ಣನಿಗಾಗಿ ವಿವಿಧ ಭಕ್ಷಗಳ ತಯಾರಿ ಭರದಿಂದ ಸಾಗಿದೆ. ಚಕ್ಕಲಿ, ಬಗೆ ಬಗೆಯ ಉಂಡೆ, ಭರ್ಫಿ ಮುಂತಾದವುಗಳು ಬಾಲಗೋಪಾಲನ ನೈವೇದ್ಯಕ್ಕೆ ಸೇರಿವೆ. ಕೃಷ್ಣನಿಗೆ ಬೆಣ್ಣೆ, ತುಪ್ಪ, ಹಾಲು, ಮೊಸರು ಅತ್ಯಂತ ಪ್ರಿಯವಾದವುಗಳು. ಆದ್ದರಿಂದ ಪ್ರತಿಮನೆಯಲ್ಲೂ ಇವುಗಳಿಂದ ತಯಾರಿಸಿದ ನೈವೇದ್ಯಕ್ಕೆ ಇಡಲಾಗುತ್ತದೆ. ಇವುಗಳ ಜೊತೆಗೆ ಶ್ರೀಕೃಷ್ಣನಿಗೆ ಪ್ರಿಯವಾದ ಶ್ರೀಖಂಡ ಇಲ್ಲದಿದ್ದರೆ ಹೇಗೆ? ಅದಕ್ಕಾಗಿ ಸಿಂಪಲ್‌ ಆಗಿ ಶ್ರೀಖಂಡ ತಯಾರಿಸುವ ಬಗೆ ಇಲ್ಲಿದೆ. ನಂದಕಿಶೋರನ ಜನ್ಮದಿನಾಚರಣೆಗೆ ಈ ವರ್ಷ ಶ್ರೀಖಂಡವನ್ನು ಸೇರಿಸಿಕೊಳ್ಳಿ.

ಶ್ರೀಖಂಡ ತಯಾರಿಸಲು ಬೇಕಾಗುವ ಸಾಮಗ್ರಿಗಳು

ತಾಜಾ ಮೊಸರು – 500 ಗ್ರಾಂ

ಸಕ್ಕರೆ – 1/4 ಕಪ್‌

ಹಾಲು – 2 ಚಮಚ

ಏಲಕ್ಕಿ ಪುಡಿ – 1/2 ಚಮಚ

ಬಾದಾಮಿ, ಪಿಸ್ತಾ – 4 (ಚಿಕ್ಕದಾಗಿ ಕತ್ತರಿಸಿದ್ದು)

ಕೇಸರಿ ದಳ – 8 ರಿಂದ 10

ಶ್ರೀಖಂಡ ತಯಾರಿಸುವ ವಿಧಾನ

  • ಮೊದಲಿಗೆ ಸ್ವಚ್ಛವಾದ ತೆಳುವಾದ ಬಟ್ಟೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಮೊಸರು ಹಾಕಿ, ರಬ್ಬರ್‌ ಬ್ಯಾಂಡ್‌ನಿಂದ ಬಂಧಿಸಿ. ಚೆನ್ನಾಗಿ ನೀರು ಹಿಂಡಿ, 2 ಗಂಟೆಗಳ ಕಾಲ ಯಾವುದಾದರೂ ಹುಕ್‌ಗೆ ಕಟ್ಟಿ ಇಡಿ.

  • ಈಗ 2 ಚಮಚ ಹಾಲಿಗೆ ಕೇಸರಿ ದಳಗಳನ್ನು ಹಾಕಿ ಇಡಿ.

  • 2 ಗಂಟೆಯ ನಂತರ ಹುಕ್‌ಗೆ ಕಟ್ಟಿದ್ದ ಮೊಸರನ್ನು ತೆಗೆದು ಒಂದು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಸಕ್ಕರೆ ಹಾಕಿ, ಒಂದು ಚಮಚದ ಸಹಾಯದಿಂದ ಚೆನ್ನಾಗಿ ಮಿಕ್ಸ್‌ ಮಾಡಿ.

  • ಅದಕ್ಕೆ ಏಲಕ್ಕಿ ಪುಡಿ, ಕೇಸರಿ ಹಾಲು ಹಾಕಿ ಇನ್ನೊಮ್ಮೆ ಮಿಕ್ಸ್‌ ಮಾಡಿ.

  • ಈಗ ಈ ಮಿಶ್ರಣಕ್ಕೆ ಕತ್ತರಿಸಿಟ್ಟುಕೊಂಡ ಅರ್ಧದಷ್ಟು ಬಾದಾಮಿ, ಪಿಸ್ತಾ ಸೇರಿಸಿ ಮಿಕ್ಸ್‌ ಮಾಡಿ. ಉಳಿದ ಬಾದಾಮಿ, ಪಿಸ್ತಾವನ್ನು ಮೇಲಿನಿಂದ ಹಾಕಿ ಅಲಂಕರಿಸಿ.

  • ಶ್ರೀಕೃಷ್ಣನ ನೈವೇದ್ಯಕ್ಕೆ ರುಚಿಯಾದ ಶ್ರೀಖಂಡ ಸಿದ್ಧ.