News Next Kannada

lifestyle

ನಾಳೆ ಶ್ರಾವಣ ಮೊದಲ ಸೋಮವಾರದ ಜೊತೆಗೆ ನಾಗರ ಪಂಚಮಿ ! ಪೂಜಾ ಸಮಯ, ವಿಧಾನ ತಿಳಿಯಿರಿ

ಆಗಸ್ಟ್‌ 17 ಶ್ರಾವಣ ಮಾಸದ ಮೊದಲ ಶುಭ ಸೋಮವಾರ ಇದರ ಜೊತೆಗೆ ಈ ವರ್ಷ ನಾಗರ ಪಂಚಮಿಯೂ ಸೇರಿದೆ. ನಾಗರ ಪಂಚಮಿಯ ಪೂಜಾ ಸಮಯ ಮತ್ತು ವಿಧಾನ ಇಲ್ಲಿದೆ.

By Archana V Bhat
Photo: PC : AI

ನಾಗರ ಪಂಚಮಿ ಕರುನಾಡಿನೆಲ್ಲಡೆ ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುವ ದೊಡ್ಡ ಹಬ್ಬ. ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿಯನ್ನು ಭಕ್ತರು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ವರ್ಷದ ನಾಗರ ಪಂಚಮಿ ಬಹಳ ವಿಶೇಷವಾಗಿದೆ. ಏಕೆಂದರೆ ಶ್ರಾವಣದ ಮೊದಲ ಸೋಮವಾರದ ವೃತಾಚರಣೆಯಂದೇ ನಾಗ ಪಂಚಮಿಯನ್ನೂ ಆಚರಿಸಲಾಗುತ್ತಿದೆ. ಇದೊಂದು ಅಪರೂಪದ ಸಂಯೋಗವೆಂದು ಹೇಳಲಾಗುತ್ತಿದೆ. ಏಕೆಂದರೆ ಶ್ರಾವಣ ಸೋಮವಾರದ ಪೂಜೆಯನ್ನು ಶಿವನಿಗೆ ಅರ್ಪಿಸಲಾಗಿದೆ. ನಾಗ ದೇವನನ್ನು ಶಿವನು ತನ್ನ ಕೊರಳೊಳಗೆ ಅಲಂಕರಿಸಿದ್ದಾನೆ. ಈ ಕಾರಣದಿಂದಲೇ ಶ್ರಾವಣ ಸೋಮವಾರದಂದು ಬಂದಿರುವ ನಾಗ ಪಂಚಮಿಯಂದು ಶಿವನ ಆರಾಧನೆ ಜೊತೆಗೆ ನಾಗ ದೇವನ ಆರಾಧನೆಯೂ ನಡೆಯುವುದರಿಂದ ಬಹಳ ಮಹತ್ವದ್ದಾಗಿದೆ.

ನಾಗರ ಪಂಚಮಿ ಯಾವಾಗ?

ಹಿಂದೂ ಪಂಚಾಂಗದ ಪ್ರಕಾರ ನಾಗರ ಪಂಚಮಿಯನ್ನು ಆಗಸ್ಟ್‌ 17 ರಂದು ಆಚರಿಸಲಾಗುತ್ತಿದೆ.

ಪೂಜಾ ಸಮಯ

ನಾಗರ ಪಂಚಮಿಯ ಪೂಜಾ ಸಮಯವು ಬೆಳಿಗ್ಗೆ 06:04 ರಿಂದ ಪ್ರಾರಂಭವಾಗಿ ಬೆಳಿಗ್ಗೆ 08:39 ರವರೆಗೆ ಇರುತ್ತದೆ.

ಪೂಜಾ ವಿಧಾನ

ನಾಗ ಪಂಚಮಿಯ ದಿನದಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆ ಧರಿಸಿ. ಪೂಜಾ ಸಂಕಲ್ಪ ಮಾಡಿ. ನಂತರ ನಾಗರ ವಿಗ್ರಹ ಅಥವಾ ಚಿತ್ರಪಟಕ್ಕೆ ಹೂವು, ದೀಪ, ಧೂಪ ಮತ್ತು ನೈವೇದ್ಯವನ್ನು ಅರ್ಪಿಸಿ. ನಂತರ ನಾಗರ ಪಂಚಮಿಯ ಕಥೆಯನ್ನು ಓದಿ. ಕೊನೆಯದಾಗಿ ನಾಗ ದೇವರಿಗೆ ಆರತಿ ಮಾಡಿ.

ಶ್ರಾವಣ ಸೋಮವಾರ ಶಿವನ ಪೂಜೆ

ನಾಗ ದೇವನನ್ನು ಪೂಜಿಸುವ ಮೊದಲು ಶಿವನನ್ನು ಪೂಜಿಸಿ. ಶಿವಲಿಂಗಕ್ಕೆ ನೀರು, ಹಾಲು, ಬಿಲ್ವಪತ್ರೆ, ಹೂವು ಮತ್ತು ಅಕ್ಷತೆ ಅರ್ಪಿಸಿ. ಶ್ರಾವಣ ಸೋಮವಾರದ ಶಿವ ಕಥಾ ಪುರಾಣವನ್ನು ಕೇಳಿ. ಶಿವಲಿಂಗಕ್ಕೆ ನೀಲಿ ಶಂಖ ಪುಷ್ಪ ಅರ್ಪಿಸಿ. ಇದರಿಂದ ದಾರಿದ್ರ್ಯ ದೂರವಾಗುತ್ತದೆ ಎಂಬ ನಂಬಿಕೆಯಿದೆ. ಈ ಪೂಜೆಯ ಫಲವಾಗಿ ಸುಖ, ಸಂಪತ್ತು ಬರಲಿದೆ.

ನಾಗರ ಪಂಚಮಿಯಂದು ಏನು ಮಾಡಬಾರದು?

ನಾಗಪಂಚಮಿಯ ದಿನದಂದು ಜೀವಂತ ಹಾವುಗಳನ್ನು ಹಿಡಿಯುವುದು ಅಥವಾ ಬಲವಂತವಾಗಿ ಅವುಗಳಿಗೆ ಹಾಲೆರೆಯುವುದನ್ನು ಮಾಡಬೇಡಿ. ಏಕೆಂದರೆ ಇದರಿಂದ ಹಾವಿಗೆ ಹಾನಿಯಾಗುತ್ತದೆ. ನಾಗರ ಪಂಚಮಿಯಂದು ಇತರ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ. ಕೋಪ, ವಾದ ಮತ್ತು ಕಠೋರ ಮಾತುಗಳನ್ನು ಆಡಬೇಡಿ.