ತ್ವಚೆಯ ಆರೈಕೆಗೆ ದಿವ್ಯೌಷಧಿ : ತೆಂಗಿನ ಎಣ್ಣೆಯಲ್ಲಿದೆ ಹಲವು ಪ್ರಯೋಜನಗಳು
ದುಬಾರಿ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಬಳಸುವ ಬದಲಿಗೆ ತ್ವಚೆಯ ಆರೈಕೆಯ ದಿನಚರಿಯಲ್ಲಿ ತೆಂಗಿನ ಎಣ್ಣೆ ಉತ್ತಮವಾಗಿದೆ. ಡ್ರೈ ಸ್ಕಿನ್ ಸಮಸ್ಯೆಗೆ ತೆಂಗಿನ ಎಣ್ಣೆಯನ್ನು ಈ ರೀತಿಯಾಗಿ ಬಳಸಿ.
By Archa V Bhat
1 min read
ಪ್ರಾಚೀನ ಕಾಲದಿಂದಲೂ ತೆಂಗಿಗೆ ಬಹಳ ಮಹತ್ವ ನೀಡಲಾಗಿದೆ. ಇದರ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುವುದರಿಂದ ಇದನ್ನು ಕಲ್ಪ ವೃಕ್ಷವೆಂದೂ ಕರೆಯುತ್ತಾರೆ. ಎಳನೀರು, ಕೊಬ್ಬರಿ, ತೆಂಗಿನ ಕಾಯಿ, ತೆಂಗಿನ ಎಣ್ಣೆ ಇವೆಲ್ಲವೂ ದೈನಂದಿನ ಬದುಕಿನಲ್ಲಿ ಜನಪ್ರಿಯ. ತೆಂಗಿನ ಎಣ್ಣೆಯನ್ನಂತೂ ಹೆಚ್ಚಾಗಿ ಕೂದಲ ಆರೈಕೆಗೆ ಬಳಸಲಾಗುತ್ತದೆ. ಆದರೆ ತೆಂಗಿನ ಎಣ್ಣೆ ತ್ವಚೆಯ ಆರೈಕೆಗೂ ಬಹಳ ಉಪಯುಕ್ತವಾಗಿದೆ. ಇದರಲ್ಲಿರುವ ಲಾರಿಕ್ ಮತ್ತು ಕ್ಯಾಪ್ರಿಲಿಕ್ ಆಮ್ಲಗಳು, ವಿಟಮಿನ್ ಇ ಪೋಷಕಾಂಶಗಳು ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮವನ್ನು ಆಳವಾಗಿ ಪೋಷಿಸುತ್ತದೆ. ತೆಂಗಿನ ಎಣ್ಣೆಯನ್ನು ತ್ವಚೆಯ ಆರೈಕೆಗೆ ಹೇಗೆಲ್ಲಾ ಸೇರಿಸಿಕೊಳ್ಳಬಹುದು ಎಂದು ನೋಡೋಣ.
ಮಾಯಿಶ್ಚರೈಸರ್
ನಿಮ್ಮದು ಒಣ ಚರ್ಮವಾಗಿದ್ದರೆ ತೇವಾಂಶವನ್ನು ಕಾಪಾಡಿಕೊಳ್ಳಲು ತೆಂಗಿನ ಎಣ್ಣೆಯನ್ನು ಬಳಸಬಹುದು. ಇದೊಂದು ನೈಸರ್ಗಿಕ ಮಾಯಿಶ್ಚರೈಸರ್. ಸ್ನಾನದ ನಂತರ ಕೈ–ಕಾಲು, ಹಿಮ್ಮಡಿಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ.
ಮೇಕಪ್ ತೆಗೆಯಲು
ಮೇಕಪ್ ತೆಗೆಯಲು ದುಬಾರಿ ಮೇಕಪ್ ರಿಮೂವರ್ ಖರೀದಿಸುವ ಬದಲಿಗೆ ತೆಂಗಿನ ಎಣ್ಣೆಯನ್ನು ಬಳಸಬಹುದು. ವಾಟರ್ ಪ್ರೂಫ್ ಮಸ್ಕರಾ, ಐಲೈನರ್ ಮತ್ತು ಲಿಪ್ಸ್ಟಿಕ್ ತೆಗೆಯಲು ತೆಂಗಿನ ಎಣ್ಣೆ ಬಳಸಿ. ಒಂದು ಹತ್ತಿ ಉಂಡೆಗೆ 2–3 ಹನಿ ತೆಂಗಿನ ಎಣ್ಣೆ ಹಾಕಿ ಅದನ್ನು ಮೇಕಪ್ ಇರುವ ಜಾಗದಲ್ಲಿ ಹಚ್ಚಿ. ಕೆಲವೇ ಸೆಕೆಂಡುಗಳಲ್ಲಿ ಮೇಕಪ್ ಅನ್ನು ಸುಲಭವಾಗಿ ತೆಗೆಯಬಹುದು.
ಫೇಸ್ ಸ್ಕ್ರಬ್
ತೆಂಗಿನ ಎಣ್ಣೆಯನ್ನು ಫೇಸ್ ಸ್ಕ್ರಬ್ ಆಗಿಯೂ ಬಳಸಬಹುದು. ಒಂದು ಸಣ್ಣ ಬಟ್ಟಲಿನಲ್ಲಿ 2 ಚಮಚ ತೆಂಗಿನ ಎಣ್ಣೆ ಮತ್ತು 1 ಚಮಚ ಉಪ್ಪು ಮಿಶ್ರಣ ಮಾಡಿ. 1 ಚಮಚ ನಿಂಬೆ ರಸ ಮತ್ತು 1 ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಿ. ನಿಮ್ಮ ಫೇಸ್ ಸ್ಕ್ರಬ್ ಸಿದ್ಧವಾಗಿದೆ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ, 2-3 ನಿಮಿಷಗಳ ಕಾಲ ಉಜ್ಜಿ, ನಂತರ ಸರಳ ನೀರಿನಿಂದ ತೊಳೆಯಿರಿ.
ಫೇಸ್ ಮಾಸ್ಕ್
ಒಣ ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ತೆಂಗಿನ ಎಣ್ಣೆ ಮತ್ತು ಅಲೋವೆರಾ ಫೇಸ್ ಮಾಸ್ಕ್ ಬಳಸಿ. ಚಮಚ ತೆಂಗಿನ ಎಣ್ಣೆ, 1 ಚಮಚ ಅಲೋವೆರಾ ಜೆಲ್ ಮತ್ತು 1 ಚಿಟಿಕೆ ಅರಿಶಿನವನ್ನು ಬೆರೆಸಿ ಫೇಸ್ ಮಾಸ್ಕ್ ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ 15-20 ನಿಮಿಷಗಳ ಕಾಲ ಹಚ್ಚಿ. ನಿಧಾನವಾಗಿ ಮಸಾಜ್ ಮಾಡಿ. ನಂತರ ನೀರಿನಿಂದ ತೊಳೆಯಿರಿ.
ಕಣ್ಣಿನ ಕೆಳಗಿನ ಕಪ್ಪು ವೃತ್ತಕ್ಕಾಗಿ
ತೆಂಗಿನ ಎಣ್ಣೆ ಕಣ್ಣಿನ ಕೆಳಗಿನ ಕಪ್ಪು ವೃತ್ತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಕಣ್ಣುಗಳ ಕೆಳಗೆ ವೃತ್ತಾಕಾರದ ಚಲನೆಯಲ್ಲಿ 30 ಸೆಕೆಂಡುಗಳ ಕಾಲ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೆಯೇ ಬಿಡಿ. ಮರುದಿನ ಬೆಳಿಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.
Topics

