Kannada News Next

lifestyle

ವಿಶ್ವಕರ್ಮ ಜಯಂತಿ 2026: ದೇವಶಿಲ್ಪಿ ವಿಶ್ವಕರ್ಮರನ್ನು ಪೂಜಿಸಲು ಕಾರಣವೇನು?

ಪ್ರತಿವರ್ಷ ವಿಶ್ವಕರ್ಮ ಜಯಂತಿಯನ್ನು ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಹಾಗಾದ್ರೆ ವಿಶ್ವಕರ್ಮ ಯಾರು? ದೇವಶಿಲ್ಪಿ ಎಂದು ಕರೆಯುವುದೇಕೆ? ಇಲ್ಲಿದೆ ಓದಿ.

By Archana V Bhat
Photo: AI

ಭಾರತದಲ್ಲಿ ದೀಪಾವಳಿ, ದಸರಾ, ಗಣೇಶ ಚತುರ್ಥಿಯಂಥ ದೊಡ್ಡ ದೊಡ್ಡ ಹಬ್ಬಗಳ ಆಚರಣೆಯ ಜೊತೆಗೆ ಇನ್ನಿತರ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಇವುಗಳಲ್ಲಿ ವಿಶ್ವಕರ್ಮ ಜಯಂತಿಯೂ ಒಂದು. ಇದು ದೇವಶಿಲ್ಪಿ ವಿಶ್ವಕರ್ಮ ಹುಟ್ಟಿದ ದಿನ. ಪ್ರತಿವರ್ಷ ಸೆಪ್ಟೆಂಬರ್‌ 17 ರಂದು ಬ್ರಹ್ಮಾಂಡದ ನಿರ್ಮಾತೃ ಎಂದು ಕರೆಯಲ್ಪಡುವ ವಿಶ್ವಕರ್ಮರನ್ನು ಪೂಜಿಸಲಾಗುತ್ತದೆ. ದೇವಶಿಲ್ಪಿ ವಿಶ್ವಕರ್ಮರ ಜಯಂತಿಯು ಕುಶಲಕರ್ಮಿಗಳು, ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು, ಕಾರ್ಖಾನೆ ಕೆಲಸಗಾರರು, ತಂತ್ರಜ್ಞರು ಯಂತ್ರಶಾಸ್ತ್ರಜ್ಞರು ಮುಂತಾದ ತಾಂತ್ರಿಕ ಕೆಲಸಗಳನ್ನು ಮಾಡುವ ಪ್ರತಿಯೊಬ್ಬರಿಗೂ ವಿಶೇಷವಾಗಿದೆ. ಸಾಮಾನ್ಯವಾಗಿ ಇದನ್ನು ಮನೆಗಳಲ್ಲಿ ಆಚರಿಸಲಾಗುವುದಿಲ್ಲ ಆದರೆ, ಕಛೇರಿ, ಕಾರ್ಖಾನೆಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ವಿಶ್ವಕರ್ಮ ಜಯಂತಿ ದಿನಾಂಕ : ಗುರುವಾರ, ಸೆಪ್ಟೆಂಬರ್‌ 17,02026

ಪೂಜಾ ಮುಹೂರ್ತ : ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 4:15 ರವರೆಗೆ

ಪೂಜಾ ವಿಧಿ:

ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೊದಲು ಯಂತ್ರೋಪಕರಣ ಮತ್ತು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ವಿಶ್ವಕರ್ಮನ ವಿಗ್ರಹ ಅಥವಾ ಫೋಟೋವನ್ನು ಇಡಿ. ಅದಕ್ಕೆ ಹೂವುಗಳಿಂದ ಅಲಂಕಾರ ಮಾಡಿ. ದೀಪ ಹಚ್ಚಿ, ಧೂಪ, ಹೂವುಗಳನ್ನು ಅರ್ಪಿಸಿ. ಭಗವಾನ್‌ ವಿಶ್ವಕರ್ಮ ಮಂತ್ರಗಳನ್ನು ಪಠಿಸಿ, ಆರತಿ ಮಾಡಿ. ಸಿಹಿ ತಿಂಡಿ ಅರ್ಪಿಸಿ.

ವಿಶ್ವಕರ್ಮ ಜಯಂತಿಯನ್ನು ಆಚರಿಸಲು ಕಾರಣವೇನು?

ಋಗ್ವೇದದ ಪ್ರಕಾರ ವಿಶ್ವಕರ್ಮನು ಬ್ರಹ್ಮನ ಮಗ. ಬ್ರಹ್ಮ ಸೃಷ್ಟಿಯ ಕರ್ತೃನಾದರೆ, ವಿಶ್ವಕರ್ಮನು ಸೃಷ್ಟಿಯನ್ನು ನಿರ್ಮಾಣಮಾಡಿದವನು. ಹಾಗಾಗಿಯೇ ವಿಶ್ವಕರ್ಮನನ್ನು ದೇವತೆಗಳ ವಾಸ್ತುಶಿಲ್ಪ ಎನ್ನಲಾಗುತ್ತದೆ. ಪುರಾಣ, ರಾಮಾಯಣ ಮತ್ತು ಮಹಾಭಾರತದಲ್ಲಿಯೂ ವಿಶ್ವಕರ್ಮನಿಗೆ ಮಹತ್ವದ ಸ್ಥಾನವಿದೆ. ಇವುಗಳ ಪ್ರಕಾರ ಶ್ರೀಕೃಷ್ಣನಿಗೆ ದ್ವಾರಕೆಯನ್ನು, ಪಾಂಡವರಿಗೆ ಇಂದ್ರಪ್ರಸ್ಥವನ್ನು, ಸುಧಾಮನಿಗೆ ಸುಧಾಮಪುರಿಯನ್ನು, ರಾವಣನಿಗೆ ಚಿನ್ನದ ಲಂಕೆಯನ್ನು ಹಾಗು ದೇವತೆಗಳಿಗೆ ಸ್ವರ್ಗಲೋಕವನ್ನು ನಿರ್ಮಿಸಿಕೊಟ್ಟಿದ್ದಾನೆ. ಇದರ ಜೊತೆಗೆ ವಿಷ್ಣುವಿನ ಸುದರ್ಶನ ಚಕ್ರ, ಶಿವನ ತ್ರಿಶೂಲ, ಕಾರ್ತಿಕೇಯನ ಈಟಿ ಸೇರಿದಂತೆ ಅನೇಕ ದೇವಾನುದೇವತೆಗಳಿಗೆ ಆಯುಧಗಳನ್ನು, ಮಂಗಳ ವಾದ್ಯಗಳನ್ನು ರಚಿಸಿಕೊಟ್ಟಿದ್ದಾನೆ. ಹಾಗಾಗಿ ಯಾವುದೇ ನಿರ್ಮಾಣ ಕೆಲಸಗಳನ್ನು ಪ್ರಾರಂಭಿಸುವ ಮೊದಲು ವಿಶ್ವಕರ್ಮರನ್ನು ಪೂಜಿಸಲಾಗುತ್ತದೆ. ಇದರಿಂದ ಕೆಲಸವು ಯಾವುದೇ ಅಡೆತಡೆಗಳಲ್ಲಿದೇ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆಯಿದೆ.