ಬೆಂಗಳೂರು ಟ್ರಾಫಿಕ್​ಗೆ ಬ್ರೇಕ್​ ಹಾಕಲು ಮಾಸ್ಟರ್​ ಪ್ಲಾನ್​ – ಮೆಟ್ರೋ ಬಳಸುವ ಬಯೋಕಾನ್​ ಸಿಬ್ಬಂದಿಗೆ ಬೋನಸ್​

ಬೆಂಗಳೂರಿನಲ್ಲಿ ಇರುವ ಟ್ರಾಫಿಕ್​ ಸಮಸ್ಯೆ ಪರಿಹಾರಕ್ಕೆ ಪ್ರತಿಷ್ಠಿತ ಬಯೋಕಾನ್​ ಸಂಸ್ಥೆಯು ಹೊಸ ಮಾಸ್ಟರ್​ ಪ್ಲಾನ್​ ಕಂಡುಹಿಡಿದಿದೆ. ಅದೇನು? ಇಲ್ಲಿದೆ ಓದಿ.

ರಾಜಧಾನಿ ಬೆಂಗಳೂರಿನಲ್ಲಿ ಇರುವ ಟ್ರಾಫಿಕ್​ ಸಮಸ್ಯೆ ಇಂದು ನೆನ್ನೆಯದಲ್ಲ. ವಾಹನ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಟ್ರಾಫಿಕ್​ ಸಮಸ್ಯೆ ಎನ್ನುವುದು ದೊಡ್ಡ ತಲೆನೋವಾಗಿಯೇ ಸಂಭವಿಸಿದೆ. ವಿಶ್ವದಲ್ಲೇ ಅತೀ ಹೆಚ್ಚು ಸಂಚಾರ ದಟ್ಟಣೆಯ ನಗರ ಎನಿಸಿರುವ ಬೆಂಗಳೂರು, ಟ್ರಾಫಿಕ್​ ಜಾಂ ಸಮಸ್ಯೆಗೆ ಎತ್ತಿದ ಕೈ ಎನಿಸಿದೆ. ಈ ಸಮಸ್ಯೆ ಪರಿಹಾರಕ್ಕೆ ಪ್ರತಿಷ್ಠಿತ ಬಯೋಕಾನ್​ ಸಂಸ್ಥೆಯು ಹೊಸ ಮಾಸ್ಟರ್​ ಪ್ಲಾನ್​ ಕಂಡುಹಿಡಿದಿದೆ.

ಹೌದು..! ಬಯೋಕಾನ್​ ಕಂಪನಿಯು ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಾರ್ವಜನಿಕ ಸಾರಿಗೆ ಬಳಕೆ ಮಾಡುವಂತೆ ಕರೆ ನೀಡಿದೆ. ವಾರದಲ್ಲಿ ಕನಿಷ್ಠ 2 ದಿನ ಸಾರ್ವಜನಿಕ ಸಾರಿಗೆ ಬಳಕೆ ಮಾಡುವ ಈ ಕಂಪನಿಯ ಸಿಬ್ಬಂದಿಗೆ ಸಂಬಳದ ಜೊತೆ ಪ್ರೋತ್ಸಾಹ ಧನವನ್ನೂ ಈ ಕಂಪನಿ ನೀಡಿಲಿದೆಯಂತೆ. ಮೊದಲ ಹಂತದಲ್ಲಿ ಒಂದು ಸಾವಿರ ಉದ್ಯೋಗಿಗಳಿಗೆ ಪ್ರತಿ ತಿಂಗಳು 2,000 ರೂಪಾಯಿಗಳ ಮೆಟ್ರೋ ಪಾಸ್ ಅಥವಾ ಇನ್ಸೆಂಟಿವ್ ನೀಡಲು ಸಂಸ್ಥೆ ನಿರ್ಧರಿಸಿದೆ.

ಇದನ್ನೂ ಓದಿ: ಬಡರೋಗಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್​ನ್ಯೂಸ್​ : ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ

ಈ ಕುರಿತು ಮಾತನಾಡಿರುವ ಬಯೋಕಾನ್​ ಮುಖ್ಯಸ್ಥೆ ಕಿರಣ್​ ಮಜುಂದಾರ್​ ಷಾ ಅವರು, ಆರ್​.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗ ದಲ್ಲಿ ಮೆಟ್ರೋ ಸಂಚಾರವನ್ನು ಆಯ್ಕೆ ಮಾಡಿಕೊಂಡಲ್ಲಿ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಮ್ಮ ಈ ಸಂಸ್ಥೆಯ ನಿರ್ಧಾರದಂತೆ ಇತರೆ ಕಂಪನಿಗಳೂ ಇದನ್ನು ಪಾಲಿಸಿದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ಸಾರಿಗೆ ಬಳಕೆ ಮಾಡುವವರಿಗೆ ಇನ್ಸೆಂಟಿವ್​ ನೀಡುವುದು ಒಂದೆಡೆಯಾದರೆ ಕಚೇರಿಗೆ ಸ್ವಂತ ಕಾರು ಅಥವಾ ಬೈಕಿನಲ್ಲಿ ಬರುವವರಿಗೆ ಪಾರ್ಕಿಂಗ್​ ಶುಲ್ಕ ವಿಧಿಸಲು ಬಯೋಕಾನ್​ ಕಂಪನಿ ನಿರ್ಧರಿಸಿದೆ. ಹೀಗಾಗಿ ಪಾರ್ಕಿಂಗ್ ಶುಲ್ಕ ಪಾವತಿ ತಪ್ಪಿಸಲು ಈಗಾಗಲೇ ಸಿಬ್ಬಂದಿ ಮೆಟ್ರೋ ಹಾಗೂ ಬಿಎಂಟಿಸಿ ಬಳಕೆ ಮಾಡುತ್ತಿದ್ದಾರೆ ಎಂದು ಕಿರಣ್​ ಮಜುಂದಾರ್​ ಹೇಳಿದರು.

Exit mobile version