ಬಡರೋಗಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ನ್ಯೂಸ್ : ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು, ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ
ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಸೀಮಿತವಾಗಿದ್ದ ಮೊಣಕಾಲು ಹಾಗೂ ಸೊಂಟಕ ಕೀಲು ಬದಲಿ ಶಸ್ತ್ರಚಿಕಿತ್ಸೆ ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರಲಿದೆ.
ರಾಜ್ಯದಲ್ಲಿ ಬಡ ಹಾಗೂ ಸಾಮಾನ್ಯ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಸೀಮಿತವಾಗಿದ್ದ ಮೊಣಕಾಲು ಹಾಗೂ ಸೊಂಟಕ ಕೀಲು ಬದಲಿ ಶಸ್ತ್ರಚಿಕಿತ್ಸೆ ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರಲಿದೆ. ಈ ಮೂಲಕ ಬಡರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಅವಲಂಬಿತರಾಗುವುದಕ್ಕೆ ತಡೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಹಿಂದೆ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದ ಶೇ. 63ರಷ್ಟು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿತ್ತು. ಇದರಿಂದ ಬಡ ರೋಗಿಗಳು ದೊಡ್ಡ ಮೊತ್ತದ ಹಣ ವ್ಯಯಿಸಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲೇ ಅತ್ಯಾಧುನಿಕ ಇಂಪ್ಲಾಂಟ್ಗಳು ಹಾಗೂ ಉಪಕರಣಗಳನ್ನು ಒದಗಿಸಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳ ಶಸ್ತ್ರಚಿಕಿತ್ಸೆಯ ಪಾಲು ಶೇ. 35 ರಿಂದ ಶೇ. 99ಕ್ಕೆ ಏರಿಕೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ರು.
ಇದನ್ನೂ ಓದಿ: ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ತೀವ್ರ ಗಂಭೀರ : ಶ್ವಾಸಕೋಶ ಕಸಿಗೆ ಸಜ್ಜಾದ ವೈದ್ಯರ ತಂಡ
ಈ ಮೊದಲು ಕೇವಲ 17 ಆಸ್ಪತ್ರೆಗಳಲ್ಲಿ ಮಾತ್ರ ಈ ಸೌಲಭ್ಯವಿತ್ತು. ಈಗ ಹೊಸದಾಗಿ 22 ಆಸ್ಪತ್ರೆಗಳನ್ನು ಸೇರ್ಪಡಿಸುವ ಮೂಲಕ ಒಟ್ಟು ಸಂಖ್ಯೆಯನ್ನು 39ಕ್ಕೆ ಏರಿಸಲಾಗಿದೆ. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ದೂರದ ನಗರಗಳಿಗೆ ಅಥವಾ ನೂರಾರು ಕಿಲೋಮೀಟರ್ ಪ್ರಯಾಣಿಸುವುದು ತಪ್ಪಿದಂತಾಗುತ್ತದೆ. 2023-24ರಲ್ಲಿ ಕೇವಲ 633 ಇದ್ದ ಶಸ್ತ್ರಚಿಕಿತ್ಸೆಗಳ ಸಂಖ್ಯೆ, ಪ್ರಸಕ್ತ ವರ್ಷದಲ್ಲಿ 1,119ಕ್ಕೆ ಏರಿಕೆಯಾಗಿರುವುದು ವ್ಯವಸ್ಥೆಯ ಸುಧಾರಣೆಗೆ ಸಾಕ್ಷಿಯಾಗಿದೆ.
ಕೇವಲ ಶಸ್ತ್ರಚಿಕಿತ್ಸೆ ಮಾತ್ರವಲ್ಲದೆ, ಆಪರೇಷನ್ ನಂತರದ ಫಿಸಿಯೋಥೆರಪಿ, ಕಾಲ್ ಸೆಂಟರ್ ಮೂಲಕ ರೋಗಿಗಳ ಆರೋಗ್ಯದ ಮೇಲೆ ನಿಗಾ ಇಡುವುದು ಮತ್ತು ಜಿಲ್ಲಾ ಮಟ್ಟದ ಟ್ರ್ಯಾಕಿಂಗ್ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ಪರಿಣಿತ ಮೂಳೆ ಶಸ್ತ್ರಚಿಕಿತ್ಸಕರಿಗೆ ಈ ನಿಟ್ಟಿನಲ್ಲಿ ವಿಶೇಷ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.



