ನವದೆಹಲಿ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಭಾರತದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತಿದೆ. ಇಂಧನ ಉತ್ಪನ್ನಗಳ ಪೂರೈಕೆಯಲ್ಲಿ ಭಾರತವು ತೀವ್ರ ಅಭಾವವನ್ನು ಎದುರಿಸುತ್ತಿದ್ದು ಜನತೆ ಸಂಕಷ್ಟದಲ್ಲಿದ್ದಾರೆ.
ಸರ್ಕಾರಗಳು ಅಗತ್ಯ ಪ್ರಮಾಣದಲ್ಲಿ ಇಂಧನ ದಾಸ್ತಾನು ಇದೆ ಎಂದು ಹೇಳುತ್ತಿದ್ದರೂ ಸಹ ಸರಿಯಾದ ಸಮಯಕ್ಕೆ ಪೂರೈಕೆಯಾಗದ ಸಿಲಿಂಡರ್ಗಳು ಹಾಗೂ ಒಂದೊಂದಾಗಿಯೇ ಬಂದ್ ಆಗುತ್ತಿರುವ ಪೆಟ್ರೋಲ್ ಬಂಕ್ಗಳು ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೊನ್ನೆ ಮೊನ್ನೆಯಱಷ್ಟೇ ಕೊರೊನಾ ಮಾದರಿಯಲ್ಲಿ ಪರಿಸ್ಥಿತಿ ಎದುರಿಸಲು ಸಜ್ಜಾಗಿ ಎಂದು ಕರೆ ನೀಡಿದ್ದಾರೆ. ಹೀಗಾಗಿ ದೇಶದಲ್ಲಿ ಮತ್ತೊಮ್ಮೆ ಲಾಕ್ಡೌನ್ ಜಾರಿಯಾಗಲಿದ್ಯಾ ಎಂಬ ಅನುಮಾನ ದಟ್ಟವಾಗಿದೆ.
ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು, ದೇಶದಲ್ಲಿ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಲಾಕ್ಡೌನ್ ವಿಧಿಸುವ ಯೋಚನೆಯೇ ಇಲ್ಲ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಗ್ರಾಹಕರಿಗೆ ಇಲ್ಲ ‘ಗ್ಯಾಸ್ ಟ್ರಬಲ್’ : ಹೋಟೆಲ್ ಮಾಲೀಕರಿಗೆ ಕೇಂದ್ರದಿಂದ ಖಡಕ್ ಆದೇಶ – ತಪ್ಪಿದರೆ ಬೀಳುತ್ತೆ ಭಾರಿ ದಂಡ!
ಜಾಗತಿಕವಾಗಿ ಪ್ರಸ್ತುತ ಬಿಕ್ಕಟ್ಟು ಎದುರಾಗಿದೆ. ದೇಶಕ್ಕೆ ಪೂರೈಕೆಯಾಗುತ್ತಿರುವ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲದ ಪ್ರಮಾಣಗಳ ಮೇಲೆ ತೀವ್ರ ನಿಗಾ ವಹಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರು ದೇಶದ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಜಾಗತಿಕ ಮಟ್ಟದಲ್ಲಿ ಹಲವು ಐತಿಹಾಸಿಕ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ.
ಯಾವುದೇ ಸವಾಲುಗಳನ್ನು ಎದುರಿಸಲು ನಾವು ಸರ್ವಸನ್ನದ್ಧ ಎಂದು ಅವರು ಹೇಳಿದ್ರು.
ಸಂಘಟಿತ ಕಾರ್ಯ ನಿರ್ವಹಿಸುತ್ತಿರುವ ಭಾರತವು ಜಾಗತಿಕ ಬಿಕ್ಕಟ್ಟಿನ ನಡುವೆಯೂ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದೆ.
ಭಾರತದಲ್ಲಿ ಲಾಕ್ಡೌನ್ ಜಾರಿಯಾಗಲಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇಂತಹ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಈ ರೀತಿಯ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದೇ ಒಂದು ಬೇಜಾವಾಬ್ದಾರಿ ನಡೆಯಾಗಿದೆ.
ಈ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು ಎಂದು ಸುದೀರ್ಘ ಟ್ವೀಟ್ ಮೂಲಕ ಹರ್ದಿಪ್ ಸಿಂಗ್ ದೇಶದ ಜನತೆಗೆ ಸ್ಪಷ್ಟನೆ ನೀಡಿದ್ದಾರೆ.
