ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದೆ. ದಕ್ಷಿಣ ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಎಂಬಲ್ಲಿರುವ 5 ಅಂತಸ್ತಿನ ಹೋಟೆಲ್ ಹಾಗೂ ರೆಸ್ಟೋರೆಂಟ್‌ನಲ್ಲಿ ನಡೆದ ಘಟನೆಯಲ್ಲಿ ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಏಷ್ಯಾ ಹಾಗೂ ಆಫ್ರಿಕಾದ ಪ್ರಜೆಗಳು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೋಟೆಲ್‌ನಲ್ಲಿ ಭೀಕರ ದುರಂತ ಸಂಭವಿಸಿದ್ದು ಹೇಗೆ?
ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ‘ಫ್ಲರಿಶ್ ಸ್ಟೇ’ (Flourish Stay B&B / Micasa Inn) ಹೋಟೆಲ್ ಮತ್ತು ಅದರ ಕೆಳಗಿನ ‘ಲೆಮನ್ ಗ್ರೀನ್ ರೆಸ್ಟೋರೆಂಟ್’ (Lemon Green Restaurant)ನಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. 5 ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಇರುವ ರೆಸ್ಟೋರೆಂಟ್ ನಲ್ಲಿ ಸಿಲಿಂಡರ್ ಸ್ಟೋಟಗೊಂಡಿದೆ. ಇದೇ ಕಾರಣದಿಂದಲೇ ಭೀಕರ ದುರಂತರ ನಡೆದಿದೆ ಎನ್ನಲಾಗುತ್ತಿದೆ.
ಸಿಲಿಂಡರ್ ಸ್ಟೋಟದಿಂದಾಗಿ ಬೆಂಕಿಯ ತೀವ್ರ ಇಡೀ ಕಟ್ಟಡಕ್ಕೆ ವ್ಯಾಪಿಸಿದತ್ತು. ಜನರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಹೊರಗೆ ಜಿಗಿದಿದ್ದಾರೆ. ಅವಘಡ ಸಂಭವಿಸುವ ವೇಳೆಯಲ್ಲಿ ಹಲವು ನಿದ್ರೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಕಟ್ಟಡದಲ್ಲಿ ಸಂಪೂರ್ಣವಾಗಿ ದಟ್ಟ ಹೊಗೆ ತುಂಬಿ ಕೊಂಡಿದ್ರಿಂದಲೇ ಹೊರಗೆ ಬರಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹೋಟೆಲ್‌ನ ಮೇಲಿನ ಮಹಡಿಗಳಿಂದ ಮೂರ್ನಾಲ್ಕು ಜನರು ಗಾಜುಗಳನ್ನು ಒಡೆದು ಕೆಳಗೆ ಜಿಗಿದಿದ್ದಾರೆ. ತಾಯಿ ಒಬ್ಬಳು ತನ್ನ ಮಗುವನ್ನು ಎದೆಗೆ ಕಚ್ಚಿ ಹಿಡಿದು 3ನೇ ಮಹಡಿಯಿಂದ ಕೆಳಗೆ ಹಾಸಿಗೆಯ ಮೇಲೆ ಜಿಗಿದಿರುವ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ದೆಹಲಿಯಲ್ಲಿ ಮುಂದುವರಿದ ರಕ್ಷಣಾ ಕಾರ್ಯ : 21 ಮಂದಿ ಸಾವು
ದೆಹಲಿ ಅಗ್ನಿಶಾಮಕ ದಳಕ್ಕೆ (DFS) ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹತ್ತಾರು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹದೋಟಿಗೆ ತಂದಿವೆ. ಹೋಟೆಲ್‌ನಲ್ಲಿದ್ದ ಒಟ್ಟು 47 ಕ್ಕೂ ಹೆಚ್ಚು ಜನರನ್ನು ಈಗಾಗಲೇ ರಕ್ಷಿಸಲಾಗಿದ್ದು, ಹೊಗೆಯಿಂದ ಉಸಿರುಗಟ್ಟಿ ಅಸ್ವಸ್ಥರಾದವರನ್ನು ತಕ್ಷಣವೇ ಏಮ್ಸ್ (AIIMS) ಮತ್ತು ಮ್ಯಾಕ್ಸ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ತರುವಷ್ಟರಲ್ಲೇ 21 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಇನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಸುಮಾರು 10ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಭೀಕರ ಅಗ್ನಿ ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಕ್ಕೆ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಿಸಲಾಗಿದೆ. ಕಟ್ಟಡದಲ್ಲಿ ಸರಿಯಾದ ವೆಂಟಿಲೇಶನ್ ಇಲ್ಲದಿರುವುದು ಹಾಗೂ ಮಾಲೀಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ದೆಹಲಿ ಸಚಿವರು ತಿಳಿಸಿದ್ದು, ಹೋಟೆಲ್ ಮಾಲೀಕನ ಬಂಧನಕ್ಕೆ ಆದೇಶಿಸಲಾಗಿದೆ.
