Kannada News Next

india

ಸ್ಲೀಪರ್‌ ಬಸ್‌ನಲ್ಲಿ ಅಗ್ನಿದುರಂತ : 9 ಮಂದಿ ಸಜೀವ ದಹನ

ಬಿಹಾರ ರಾಜ್ಯದ ನೋಂದಣಿ ಹೊಂದಿರುವ ರಾಜ್‌ ಕಲ್ಪನಾ ಟ್ರಾವೆಲ್ಸ್‌ಗೆ ಸೇರಿದ ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

By Arun Gundmi | ಅರುಣ್‌ ಗುಂಡ್ಮಿ Editor-in-Chief
9 dead after bus fire on Yamuna expressway Greater Noida

ಲಕ್ನೋ : ಸ್ಲೀಪರ್‌ ಬಸ್‌ನಲ್ಲಿ ಹೊತ್ತಿಕೊಂಡ ಬೆಂಕಿಯ ಕೆನ್ನಾಲಗೆಗೆ ಸಿಲುಕಿ 9 ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಗೌತಮ ಬುದ್ದ ನಗರ ಜಿಲ್ಲೆಯ ಗ್ರೇಟರ್‌ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿಹಾರ ರಾಜ್ಯದ ನೋಂದಣಿ ಹೊಂದಿರುವ ರಾಜ್‌ ಕಲ್ಪನಾ ಟ್ರಾವೆಲ್ಸ್‌ಗೆ ಸೇರಿದ ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಗ್ರೇಟರ್‌ ನೋಯ್ಡಾದಿಂದ ಆಗ್ರಾ ಮಾರ್ಗವಾಗಿ ಬಸ್‌ ಸಂಚರಿಸುತ್ತಿದ್ದ ವೇಳೆ, ದಯಾನತ್‌ ಗ್ರಾಮದ ಬಳಿಯಲ್ಲಿ ಬಸ್‌ನಲ್ಲಿ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡಿದೆ.

ಸಮಯಪ್ರಜ್ಞೆ ಮೆರೆದ ಬಸ್‌ ಚಾಲಕ ಕೂಡಲೇ ಬಸ್ಸನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದಾನೆ. ಆದರೆ ಕೆಲವೇ ಸೆಕೆಂಡುಗಳಲ್ಲಿ ದಟ್ಟ ಬೆಂಕಿ ಆವರಿಸಿಕೊಂಡಿದ್ದು, ಬಾರೀ ಹೊಗೆಯಿಂದಾಗಿ ಬಸ್ಸಿನ ಒಳಗಡೆ ಕುಳಿತಿದ್ದ ಪ್ರಯಾಣಿಕರು ಭೀತಿಗೆ ಒಳಗಾಗಿದ್ದಾರೆ. ಡಬ್ಬಲ್‌ ಡೆಕ್ಕರ್‌ ಬಸ್ಸಿನಲ್ಲಿದ್ದ ಪ್ರಯಾಣಿಕರು ತುರ್ತು ನಿಗಮನದ ಮೂಲಕ ಹೊರಗೆ ಹಾರಲು ಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್‌ ಬಸ್ಸಿನಲ್ಲಿ ಗಾಢ ನಿದ್ರೆಯಲ್ಲಿದ್ದ 9 ಮಂದಿ ಸಜೀವ ದಹನವಾಗಿದ್ದಾರೆ.

ಜವರಾಯನ ಪಾದ ಸೇರಿಸಿದ ಗಾಢ ನಿದ್ರೆ

ಖಾಸಗಿ ಡಬ್ಬಲ್‌ ಡೆಕ್ಕರ್‌ ಬಸ್ಸಿನಲ್ಲಿ ಒಮ್ಮಿಂದೊಮ್ಮೆಲೆ ಬೆಂಕಿ ಕಾಣಿಸಿ ಕೊಳ್ಳುತ್ತಿದ್ದಂತೆಯೇ ಬಹುತೇಕ ಪ್ರಯಾಣಿಕರು ಕಿಟಕಿಯ ಮೂಲಕ ಹೊರಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಗಾಢ ನಿದ್ರೆಯಲ್ಲಿದ್ದವರು ಹಾಗೂ ಬಸ್ಸಿನಿಂದ ಇಳಿಯೋದಕ್ಕೆ ಸಾಧ್ಯವಾದ ಮಹಿಳೆಯರು, ವೃದ್ದರು ಮತ್ತು ವಿಶೇಷ ಚೇತನ ಮಕ್ಕಳು ಸೇರಿದಂತೆ ಒಟ್ಟು 9 ಮಂದಿ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಡಿದ ಪಟಾಕಿಯಿಂದಲೇ ಅಗ್ನಿದುರಂತ

ಬಸ್ಸಿನಲ್ಲಿ ಬೆಂಕಿ ಹೊತ್ತಿಕೊಳ್ಳುವ ಸ್ವಲ್ಪ ಸಮಯದ ಮೊದಲೇ ಪಟಾಕಿ ಸಿಡಿಯುವ ದೊಡ್ಡ ಸದ್ದು ಕೇಳಿಬಂದಿತ್ತು. ಬಸ್ಸಿನಲ್ಲಿ ಅಕ್ರಮವಾಗಿ ಪಟಾಕಿ ಸಾಗಿಸಲಾಗುತ್ತಿತ್ತು ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ದುರಂತ ನಡೆದ ಸ್ಥಳದಲ್ಲಿನ ಪ್ರತ್ಯಕ್ಷದರ್ಶಿಗಳು ಹಾಗೂ ಟೋಲ್‌ ಪ್ಲಾಜಾ ಸಿಬ್ಬಂದಿಗಳು ಕೂಡ ಬಸ್ಸಿನಲ್ಲಿ ಪಟಾಕಿ ಸ್ಪೋಟಗೊಂಡಿರುವ ಕುರಿತು ಮಾಹಿತಿ ನೀಡಿದ್ದಾರೆ.

ದುರಂತ ಸ್ಥಳಕ್ಕೆ ಆಗಮಿಸಿದ ವಿಧಿವಿಜ್ಞಾನ (Forensic) ತಂಡ ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. 4-5 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳಿಗೂ ಅಧಿಕ ಕಾಲ ಅಗ್ನಿಶಾಮಕ ಸಿಬ್ಬಂದಿಗಳ ಜೊತೆಗೆ ತುರ್ತು ಗಸ್ತು ಪಡೆ, ಹಿರಿಯ ಪೊಲೀಸ್‌ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ.

ಯಮುನಾ ಎಕ್ಸ್‌ ಪ್ರೆಸ್‌ ಹೈವೆಯಲ್ಲಿನ ಜೆವರ್ ಟೋಲ್ ಮತ್ತು ಫಲೈಡಾ ಕ್ರಾಸಿಂಗ್ ನಡುವೆ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು.

ಬಸ್‌ನಲ್ಲಿ ಅಗ್ನಿ ದುರಂತ : ಸಿಎಂ ಯೋಗಿ ಆದಿತ್ಯನಾಥ್‌ ಸಂತಾಪ

ಬಸ್‌ ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಜಿಲ್ಲಾಡಳಿತ, ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದು ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ಕೊಡಿಸಬೇಕು ಜೊತೆಗೆ ಮೃತರ ಕುಟುಂಬಗಳಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸುವಂತೆ ಸೂಚಿಸಿದ್ದಾರೆ.