ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಡೆಡ್‌ಲೈನ್ : ಅಕ್ಟೋಬರ್ 1ರಿಂದ ರಿಯಾಯಿತಿ ಸಿಲಿಂಡರ್‌ಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಪಡೆಯುವ ದೇಶದ ಕೋಟ್ಯಂತರ ಗ್ರಾಹಕರಿಗೆ ಕೇಂದ್ರ ಸರ್ಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಪಡೆಯುವ ದೇಶದ ಕೋಟ್ಯಂತರ ಗ್ರಾಹಕರಿಗೆ ಕೇಂದ್ರ ಸರ್ಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ. 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ರಿಯಾಯಿತಿ ದರ ಹಾಗೂ ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ಪಡೆಯಲು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಗ್ಯಾಸ್ ಸಬ್ಸಿಡಿಯು ನೇರವಾಗಿ ನೈಜ ಫಲಾನುಭವಿಗಳಿಗೆ ತಲುಪುವಂತಾಗಲು, ನಕಲಿ ಗ್ಯಾಸ್ ಸಂಪರ್ಕಗಳನ್ನು ಪತ್ತೆಹಚ್ಚಿ ರದ್ದುಗೊಳಿಸಲು ಮತ್ತು ಗೃಹಬಳಕೆಯ ಸಿಲಿಂಡರ್‌ಗಳು ವಾಣಿಜ್ಯ ಉದ್ದೇಶಗಳಿಗೆ ದುರ್ಬಳಕೆಯಾಗುವುದನ್ನು ತಡೆಯಲು ಪೆಟ್ರೋಲಯಂ ಸಚಿವಾಲಯವು ಈ ಗಡುವು ವಿಧಿಸಿದೆ.
ಈಗಾಗಲೇ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ, ಅವರಿಗೆ ಎಂದಿನಂತೆ ಸಬ್ಸಿಡಿ ಲಭ್ಯವಾಗಲಿದೆ. ಒಂದು ವೇಳೆ ಇನ್ನು ಕೂಡ ಆಧಾರ್ ಜೋಡಣೆ ಮಾಡದಿದ್ದರೆ, ಅಕ್ಟೋಬರ್ 1ರ ನಂತರ ಈ ಪ್ರಕ್ರಿಯೆ ಮುಗಿಸಿದ ಮೇಲೆಯೇ ಸಬ್ಸಿಡಿ ದರದಲ್ಲಿ ಸಿಲಿಂಡರ್ ಬುಕಿಂಗ್ ಮಾಡಲು ಅವಕಾಶ ಸಿಗುತ್ತದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ದೇಶದ ಶೇಕಡಾ 89 ಕ್ಕೂ ಹೆಚ್ಚು ಸಕ್ರಿಯ ಗ್ರಾಹಕರು ಈಗಾಗಲೇ ಈ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಗ್ರಾಹಕರು ತಮ್ಮ ಸ್ಥಳೀಯ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಅಥವಾ ಮನೆಗೆ ಸಿಲಿಂಡರ್ ತಲುಪಿಸುವ ಡೆಲಿವರಿ ಸಿಬ್ಬಂದಿ ಸಹಾಯದಿಂದ ಸುಲಭವಾಗಿ ಬಯೋಮೆಟ್ರಿಕ್ ಮಾಡಿಸಬಹುದು. ಇದಲ್ಲದೆ, ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಕಂಪನಿಗಳ ಅಧಿಕೃತ ಮೊಬೈಲ್ ಆ್ಯಪ್‌ಗಳ ಮೂಲಕವೂ ಮನೆಯಲ್ಲೇ ಕುಳಿತು ದೃಢೀಕರಣ ಪ್ರಕ್ರಿಯೆ ಮುಗಿಸಲು ಅವಕಾಶವಿದೆ.
ಒಂದು ವೇಳೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಮಾಡಲು ಇಷ್ಟಪಡದ ಗ್ರಾಹಕರ ಗ್ಯಾಸ್ ಸಂಪರ್ಕವೇನೂ ರದ್ದಾಗುವುದಿಲ್ಲ. ಆದರೆ, ಅವರು ಅಧಿಕೃತ ಪೋರ್ಟಲ್ ಅಥವಾ ಐವಿಆರ್‌ಎಸ್ ಮೂಲಕ ನೋಂದಾಯಿಸಿಕೊಂಡು, ಸಬ್ಸಿಡಿ ರಹಿತವಾಗಿ ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಪಡೆಯಬೇಕಾಗುತ್ತದೆ. ಕಳೆದ 2023ರ ಅಕ್ಟೋಬರ್‌ನಿಂದಲೇ ಈ ಅಭಿಯಾನ ನಡೆಯುತ್ತಿದ್ದು, ಹಲವು ಬಾರಿ ಗಡುವು ವಿಸ್ತರಿಸಲಾಗಿತ್ತು. ಸದ್ಯ ಇನ್ನುಳಿದ ಗ್ರಾಹಕರು ಸಬ್ಸಿಡಿ ಸೌಲಭ್ಯವನ್ನು ತಡೆರಹಿತವಾಗಿ ಮುಂದುವರಿಸಲು ಸೆಪ್ಟೆಂಬರ್ 30ರ ಒಳಗಾಗಿ ಈ ಪ್ರಕ್ರಿಯೆ ಮುಗಿಸಿಕೊಳ್ಳುವುದು ಸೂಕ್ತ.
Topics

