Kannada News Next

india

ಸಿಜೆಪಿಗೆ ಅಣ್ಣಾಮಲೈ ಬೆಂಬಲ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಸಿಜೆಪಿ ವಿರುದ್ಧ ದೆಹಲಿ ಪೊಲೀಸರು ಕೈಗೊಂಡ ಕ್ರಮವನ್ನು ಅಣ್ಣಾಮಲೈ ‘ನಿಜಕ್ಕೂ ದೊಡ್ಡ ಅಪಚಾರ ಎಂದು ಕರೆದಿದ್ದರು.

By Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ
Annamalai Backs CJP Slams Central Government

ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ನಾಯಕರ ವಿರುದ್ಧ ದೆಹಲಿ ಪೊಲೀಸರು ಕೈಗೊಂಡ ಕ್ರಮವನ್ನು ಪ್ರಶ್ನಿಸಿರುವ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ.

ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೆ ಮುನ್ನೆಚ್ಚರಿಕೆ ಬಂಧನ ನಡೆಸುವ ಕ್ರಮದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಅವರು, ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ‘ವಿದೇಶಿ ಏಜೆಂಟ್‌ಗಳು’ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, “ಪ್ರಜಾಪ್ರಭುತ್ವದಲ್ಲಿ ಕಾನೂನು ಪ್ರಕ್ರಿಯೆಗಳ ಉಲ್ಲಂಘನೆಯನ್ನು ಪ್ರಶ್ನಿಸಿದರೆ, ನಿಮ್ಮನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ‘ವಿದೇಶಿ ಏಜೆಂಟ್’ ಎಂದು ಬಿಂಬಿಸುವುದು ಸೇರಿದಂತೆ ಹಲವು ರೀತಿಯ ದಾಳಿಗಳನ್ನು ಎದುರಿಸಬೇಕಾಗುತ್ತದೆ” ಎಂದು ಬರೆದಿದ್ದಾರೆ.

ಸಿಜೆಪಿ ವಿರುದ್ಧ ದೆಹಲಿ ಪೊಲೀಸರು ಕೈಗೊಂಡ ಕ್ರಮವನ್ನು ಅಣ್ಣಾಮಲೈ ‘ನಿಜಕ್ಕೂ ದೊಡ್ಡ ಅಪಚಾರ ಎಂದು ಕರೆದಿದ್ದರು. ಅಲ್ಲದೆ, ಪ್ರಮುಖ ಪ್ರಶ್ನೆಗಳನ್ನು ಎತ್ತುವ ಪ್ರಜಾಸತ್ತಾತ್ಮಕ ಹಕ್ಕನ್ನು ಪ್ರತಿಭಟನಾಕಾರರು ಹೊಂದಿದ್ದಾರೆ ಎಂದು ಹೇಳಿದ್ದಾರೆ..

ಇದಕ್ಕೆ ಪ್ರತಿಯಾಗಿ ಬಿಜೆಪಿ, ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಕ್ಷ ತೊರೆದ ಬಳಿಕ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಅವರು ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.

ಜೂನ್ 5, 2026ರಂದು ತಾನು ಬಿಜೆಪಿಯನ್ನು ತೊರೆದಿರುವುದಾಗಿ ಸ್ಪಷ್ಟಪಡಿಸಿರುವ ಅಣ್ಣಾಮಲೈ, ಸಿಜೆಪಿಯ ಪ್ರತಿಭಟನಾ ವಿಧಾನಗಳನ್ನು ತಾನು ಒಪ್ಪುವುದಿಲ್ಲ ಎಂದಿದ್ದಾರೆ. ಆದರೆ, ಪ್ರತಿಭಟಿಸುವ ಹಕ್ಕನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಬಿಜೆಪಿಯ ಕೆಲವರಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಿಮಗೆ ಅನುಕೂಲವಾದಾಗ ಮಾತ್ರ ಮರೆತುಬಿಡುವ ಅಭ್ಯಾಸವಿದ್ದರೆ, ಇದನ್ನು ಇನ್ನು ಮುಂದೆ ಮರೆಯಬೇಡಿ. ನಾನು ಜೂನ್ 5, 2026ರಂದು ಬಿಜೆಪಿಯನ್ನು ತೊರೆದಿದ್ದೇನೆ.

ನಿನ್ನೆ ಹೇಳಿದಂತೆ, ಸಿಜೆಪಿಯ ಪ್ರತಿಭಟನಾ ವಿಧಾನಗಳನ್ನು ನಾನು ಒಪ್ಪುವುದಿಲ್ಲ. ಅವರ ಹಲವು ವಿಧಾನಗಳು ತಪ್ಪು ದಾರಿಗೆ ಕೊಂಡೊಯ್ಯುತ್ತವೆ ಎಂದು ಭಾವಿಸುತ್ತೇನೆ. ಆದರೆ, ತಮಗೆ ಮುಖ್ಯವೆಂದು ಭಾವಿಸಿದ ವಿಷಯದ ಬಗ್ಗೆ ಪ್ರತಿಭಟಿಸುವ, ವಾದಿಸುವ ಅಥವಾ ಹೋರಾಡುವ ಹಕ್ಕು ಅವರಿಗಿದೆಯೇ ಎಂದು ಕೇಳಿದರೆ, ಖಂಡಿತವಾಗಿಯೂ ಇದೆ ಎಂದು ಹೇಳುತ್ತೇನೆ” ಎಂದು ಅಣ್ಣಾಮಲೈ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಅಣ್ಣಾಮಲೈ ಐದು ಪ್ರಶ್ನೆಗಳು:

ಕೇಂದ್ರ ಸರ್ಕಾರದ ಮುಂದೆ ಐದು ಪ್ರಮುಖ ಪ್ರಶ್ನೆಗಳನ್ನು ಇಟ್ಟಿರುವ ಅಣ್ಣಾಮಲೈ, ಪ್ರತಿಭಟನೆಗೆ ಮೀಸಲಾಗಿದ್ದ ಜಂತರ್ ಮಂತರ್ ಸ್ಥಳದ ಅಧಿಸೂಚನೆಯನ್ನು ರದ್ದುಪಡಿಸಿರುವುದು, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳಾಗಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳ ಅಧಿಕಾರ ಹಾಗೂ ಅಕ್ಟೋಬರ್ 13ರಂದು ಬಂಧಿಸಲಾದ ಸಿಜೆಪಿ ಸದಸ್ಯರ ಜಾಮೀನು ವಿಚಾರಣೆಯ ನಿರ್ವಹಣೆ ಕುರಿತು ವಿವರಣೆ ಕೇಳಿದ್ದಾರೆ.

ಇದರ ಜೊತೆಗೆ, ಎಂಟು ಜಾಮೀನುದಾರರನ್ನು ತಿರಸ್ಕರಿಸಿರುವುದು, ನೀಟ್ ಪ್ರತಿಭಟನೆಗಳ ಸಂದರ್ಭದಲ್ಲಿ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂಬ ಆರೋಪ ಹಾಗೂ SOP ಉಲ್ಲಂಘನೆಯಾಗಿದೆ ಎಂಬ ಆರೋಪಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ.

ಸಿಜೆಪಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದ ಪಟ್ಟಿಯಿಂದ ಹೇಗೆ ತೆಗೆದುಹಾಕಲಾಯಿತು ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ. ಪ್ರಕರಣ ಹೈಕೋರ್ಟ್‌ಗೆ ತಲುಪಿದ ಬಳಿಕ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಬಂಧನದಲ್ಲಿದ್ದ ಸಿಜೆಪಿ ಪದಾಧಿಕಾರಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಬಿಜೆಪಿ ನಿಜವಾಗಿಯೂ ಸಿಜೆಪಿಯನ್ನು ವಿರೋಧಿಸುತ್ತಿದೆಯೇ? ಅಥವಾ ಅದಕ್ಕೆ ಉಚಿತ ಪ್ರಚಾರ ನೀಡುತ್ತಿದೆಯೇ? ಸಿಜೆಪಿಯನ್ನು ಪ್ರಮುಖ ರಾಜಕೀಯ ಶಕ್ತಿಯಾಗಿ ಬಿಂಬಿಸುವ ಮೂಲಕ ಪ್ರತಿಪಕ್ಷಗಳ ಮತಗಳನ್ನು ವಿಭಜಿಸಲು ಬಿಜೆಪಿ ಬಯಸುತ್ತಿದೆಯೇ? ಇದೇ ರೀತಿ ಮುಂದುವರಿದರೆ, ಸಿಜೆಪಿ ಹಣ ನೀಡಿದರೂ ಇಂತಹ ಉತ್ತಮ ಪ್ರಚಾರ ತಂಡವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ!” ಎಂದು ಅವರು ಆರೋಪಿಸಿದ್ದಾರೆ.

ಅಣ್ಣಾಮಲೈ ವಿರುದ್ಧ ಬಿಜೆಪಿ ತಿರುಗೇಟು:

ಅಣ್ಣಾಮಲೈ ಹೇಳಿಕೆಗಳಿಗೆ ಬಿಜೆಪಿ ತೀವ್ರ ಪ್ರತಿಕ್ರಿಯೆ ನೀಡಿದೆ. ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ, ಪಕ್ಷ ತೊರೆದ ಬಳಿಕ ಅಣ್ಣಾಮಲೈ ಎಸ್‌ಐಆರ್ ವಿಚಾರದಲ್ಲಿ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಂದೆ ಅಣ್ಣಾಮಲೈ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸಮರ್ಥಿಸಿದ್ದರು. ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಮತದಾರರಿದ್ದು, ಅವರನ್ನು ಪಟ್ಟಿಯಿಂದ ತೆಗೆದುಹಾಕಬೇಕೆಂದು ಹೇಳಿದ್ದರು. ಈ ಪ್ರಕ್ರಿಯೆಯನ್ನು ವಿರೋಧಿಸಿದ್ದ ಡಿಎಂಕೆ ವಿರುದ್ಧವೂ ಟೀಕೆ ಮಾಡಿದ್ದರು ಎಂದು ನಾರಾಯಣನ್ ತಿರುಪತಿ ಹೇಳಿದ್ದಾರೆ.

ಮೇ 2026ರಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೊಂದಿಗೆ ನಡೆದ ಸಾರ್ವಜನಿಕ ಚರ್ಚೆಯನ್ನೂ ಅವರು ಉಲ್ಲೇಖಿಸಿದ್ದಾರೆ. ಆಗ ಅಣ್ಣಾಮಲೈ ಎಸ್‌ಐಆರ್ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಅಗತ್ಯವಾದ ಕ್ರಮ ಎಂದು ಸಮರ್ಥಿಸಿದ್ದರು. ಅಲ್ಲದೆ, ಪ್ರತಿಪಕ್ಷಗಳು ದ್ವಂದ್ವ ನಿಲುವು ಹೊಂದಿವೆ ಎಂದು ಆರೋಪಿಸಿದ್ದರು ಎಂದು ನಾರಾಯಣನ್ ತಿರುಪತಿ ಹೇಳಿದ್ದಾರೆ.

ಇಂದು ಬಿಜೆಪಿ ತೊರೆದ ಬಳಿಕ ಅದೇ ಅಣ್ಣಾಮಲೈ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ” ಎಂದು ತಿರುಪತಿ ಟೀಕಿಸಿದ್ದಾರೆ. ಸಿಜೆಪಿ ಮತ್ತು ಕಾಂಗ್ರೆಸ್ ಎತ್ತಿರುವ ಆಕ್ಷೇಪಗಳಿಗೆ ಅಣ್ಣಾಮಲೈ ಬೆಂಬಲ ನೀಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನೆಗಳು ಕಾನೂನು ಮಿತಿಯನ್ನು ಮೀರಿದಾಗ ಅಥವಾ ಪ್ರತಿಭಟನಾಕಾರರಿಗೆ ಸ್ಥಳದಿಂದ ತೆರಳುವಂತೆ ಸೂಚಿಸಿದರೂ ಅವರು ಮುಂದುವರಿದಾಗ ಪೊಲೀಸರು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಿಜೆಪಿ ವಕ್ತಾರ ಸಮರ್ಥಿಸಿಕೊಂಡಿದ್ದಾರೆ.

ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಗಳ ಅರಿವಿದೆ. ಹೀಗಿರುವಾಗ ಪೊಲೀಸರ ಕ್ರಮವನ್ನು ಟೀಕಿಸುವುದು ಅವರ ಹಿಂದಿನ ಜವಾಬ್ದಾರಿಗಳಿಗೆ ವಿರುದ್ಧವಾಗಿದೆ ಎಂದು ನಾರಾಯಣನ್ ತಿರುಪತಿ ಹೇಳಿದ್ದಾರೆ.

ವಿಶೇಷವಾಗಿ ಪೊಲೀಸ್ ಅಧಿಕಾರಿಯಾಗಿ ಮತ್ತು ಹಿರಿಯ ರಾಜಕೀಯ ನಾಯಕರಾಗಿ ಕಾರ್ಯನಿರ್ವಹಿಸಿರುವ ವ್ಯಕ್ತಿಯಿಂದ ನಿರಂತರವಾದ ಒಂದೇ ನಿಲುವನ್ನು ನಿರೀಕ್ಷಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ, ಪ್ರತಿಭಟನಾಕಾರರ ವಿಧಾನಗಳು ವಿವಾದಾಸ್ಪದವಾಗಿದ್ದರೂ ಅವರು ಎತ್ತುವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂಬ ತಮ್ಮ ನಿಲುವನ್ನು ಅಣ್ಣಾಮಲೈ ಪುನರುಚ್ಚರಿಸಿದ್ದಾರೆ. ಕೆಲ ವ್ಯಕ್ತಿಗಳಿಂದ ಆಗಿರಬಹುದಾದ ತಪ್ಪುಗಳ ಆಧಾರದ ಮೇಲೆ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸಬಾರದು ಎಂದೂ ಅವರು ಎಚ್ಚರಿಸಿದ್ದಾರೆ.