ಕೇವಲ 2 ವರ್ಷ ಡಿಜಿಟಲ್ ಅರೆಸ್ಟ್‌ನಿಂದ ₹56,000 ಕೋಟಿ ವಂಚನೆ : ಭಾರತವನ್ನೇ ನಡುಗಿಸಿದ ಸೈಬರ್‌ ದರೋಡೆ

ರಾಷ್ಟ್ರೀಯ ಮಟ್ಟದಲ್ಲಿ ಸೈಬರ್ ವಂಚನೆಗೆ ತುತ್ತಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

By ರಶ್ಮಿ ಎಸ್. | Rashmi S

1 min read

WhatsAppPost
digital arrest scam 56000 crore fraud india
digital arrest scam 56000 crore fraud india

ನವದೆಹಲಿ : ಭಾರತದಲ್ಲಿ ತಂತ್ರಜ್ಞಾನ ಬೆಳೆದಂತೆ ಆನ್‌ಲೈನ್ ಅಪರಾಧಗಳ ಸಂಖ್ಯೆಯೂ ಭೀಕರವಾಗಿ ಹೆಚ್ಚುತ್ತಿದ್ದು, ದೇಶದ ಆರ್ಥಿಕ ಭದ್ರತೆಗೆ ದೊಡ್ಡ ಕುತ್ತು ಬಂದೊದಗಿದೆ. ಕಳೆದ 2 ವರ್ಷಗಳಲ್ಲಿ ಹೂಡಿಕೆ, ಡಿಜಿಟಲ್‌ ಅರೆಸ್ಟ್‌ನಿಂದ ಬರೋಬ್ಬರಿ 50 ಸಾವಿರ ಕೋಟಿಗೂ ಅಧಿಕ ಹಣವನ್ನು ಭಾರತೀಯರು ಕಳೆದುಕೊಂಡಿದ್ದಾರೆ.

ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಕಳೆದ ಕೇವಲ ಎರಡು ವರ್ಷಗಳ ಅವಧಿಯಲ್ಲಿ ದೇಶಾದ್ಯಂತ ಸಾರ್ವಜನಿಕರು ಬರೋಬ್ಬರಿ 56,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಸೈಬರ್ ವಂಚಕರಿಗೆ ಬಲಿ ಕೊಟ್ಟಿದ್ದಾರೆ. ಡಿಜಿಟಲ್ ಪಾವತಿಗಳು ಹೆಚ್ಚಾದ ಬೆನ್ನಲ್ಲೇ ಸಂಭವಿಸಿರುವ ಈ ಲೂಟಿಯು ತನಿಖಾ ಸಂಸ್ಥೆಗಳನ್ನು ಬೆಚ್ಚಿಬೀಳಿಸಿದೆ.

ವಂಚಕರು ಜನರನ್ನು ಸೆಳೆಯಲು ನೂತನ ತಂತ್ರಗಳನ್ನು ಬಳಸುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಲಾಭ ನೀಡುವುದಾಗಿ ನಕಲಿ ಆಪ್‌ಗಳ ಮೂಲಕ ನಂಬಿಸಿ, ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡುವ ಜಾಲಗಳು ಸಕ್ರಿಯವಾಗಿವೆ.

ಒಟ್ಟು ಸೈಬರ್ ನಷ್ಟದಲ್ಲಿ ಇಂತಹ ಹೂಡಿಕೆ ಹಗರಣಗಳ ಪಾಲು ಅತ್ಯಂತ ದೊಡ್ಡದಾಗಿದೆ. ಇದರೊಂದಿಗೆ, ಅಮಾಯಕರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಸಿಬಿಐ ಅಥವಾ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಹೆದರಿಸಿ ಹಣ ವಸೂಲಿ ಮಾಡುವ 'ಡಿಜಿಟಲ್ ಅರೆಸ್ಟ್' ದಂಧೆ ಕೂಡ ವ್ಯಾಪಕವಾಗಿ ಹರಡಿದೆ.

ರಾಷ್ಟ್ರೀಯ ಮಟ್ಟದಲ್ಲಿ ಸೈಬರ್ ವಂಚನೆಗೆ ತುತ್ತಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ದಿನಂಪ್ರತಿ ಕೋಟ್ಯಂತರ ರೂಪಾಯಿಗಳು ಸೈಬರ್ ಖದೀಮರ ಪಾಲಾಗುತ್ತಿವೆ.

ಬ್ಯಾಂಕಿಂಗ್ ನಕಲಿ ಲಿಂಕ್‌ಗಳು, ಅರೆಕಾಲಿಕ ಉದ್ಯೋಗದ ಆಮಿಷಗಳು ಹಾಗೂ ನಕಲಿ ಸಾಲದ ಆಪ್‌ಗಳು ಜನರ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತಿವೆ. ಈ ದರೋಡೆಯನ್ನು ತಡೆಯಲು ಸುಪ್ರೀಂ ಕೋರ್ಟ್ ರಿಸರ್ವ್ ಬ್ಯಾಂಕ್‌ಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಗಳನ್ನು ರೂಪಿಸಲು ಸೂಚಿಸಿದೆ.

ಸರ್ಕಾರವು ಈಗಾಗಲೇ ದೇಶಾದ್ಯಂತ ಲಕ್ಷಾಂತರ ಸಂಶಯಾಸ್ಪದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು, ಕೋಟಿಗಟ್ಟಲೆ ನಕಲಿ ಸಿಮ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಆನ್‌ಲೈನ್‌ನಲ್ಲಿ ಯಾವುದೇ ಹಣಕಾಸಿನ ವಂಚನೆಗೆ ಒಳಗಾದ ತಕ್ಷಣ ಸಾರ್ವಜನಿಕರು ಹಣವನ್ನು ಮರಳಿ ಪಡೆಯಲು ತಕ್ಷಣವೇ 1930 ರಾಷ್ಟ್ರೀಯ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸುವ ಅವಕಾಶವನ್ನೂ ನೀಡಲಾಗಿದೆ.

Topics

ಸಂಬಂಧಿತ ಸುದ್ದಿಗಳು