Kannada News Next

india

H1N1 Virus Delhi: ದೆಹಲಿಯಲ್ಲಿ H1N1 ಪ್ರಕರಣಗಳು 6 ಪಟ್ಟು ಏರಿಕೆ; ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹವಾಮಾನ ಬದಲಾವಣೆ, ಮಳೆಗಾಲದ ಕಾರಣದಿಂದಾಗಿ ಸೋಂಕುಗಳ ಪ್ರಮಾಣ ದಿಢೀರ್‌ ಏರಿಕೆಯನ್ನು ಕಂಡಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
h1n1 virus delhi cases symptoms precautions

ನವದೆಹಲಿ: ಭಾರತದ ರಾಜಧಾನಿ ದೆಹಲಿಯಲ್ಲಿ ಎಚ್‌1ಎನ್‌1 (H1N1 ) ವೈರಸ್ (Swine Flu) ಪ್ರಕರಣ ದಿಢೀರ್‌ ಏರಿಕೆ ಕಂಡಿದೆ. ಹಿಂದಿನ ಅವಧಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಎನ್‌1ಎನ್‌1 ಪ್ರಕರಣಗಳ ಸಂಖ್ಯೆಯಲ್ಲಿ 6 ಪಟ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ದೆಹಲಿಯಲ್ಲಿ ಇದುವರೆಗೆ ಒಟ್ಟು 1,344 ಎನ್‌1 ಎನ್‌1 ಪ್ರಕರಣ ದಾಝಲಾಗಿದ್ದು, ಈ ಹಿಂದೆ ಕೇವಲ 229 ಪ್ರಕರಣಗಳಿತ್ತು.

ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹವಾಮಾನ ಬದಲಾವಣೆ, ಮಳೆಗಾಲದ ಕಾರಣದಿಂದಾಗಿ ಸೋಂಕುಗಳ ಪ್ರಮಾಣ ದಿಢೀರ್‌ ಏರಿಕೆಯನ್ನು ಕಂಡಿದೆ. ಅದ್ರಲ್ಲೂ ಕಳೆದೊಂದು ವಾರಗಳಿಂದಲೂ ಆಸ್ಪತ್ರೆಗಳಿಗೆ ಜ್ವರ, ಕೆಮ್ಮು ಮತ್ತು ಇತರ ಉಸಿರಾಟದ ಸಮಸ್ಯೆಗಳಿಂದ ಬರುವ ರೋಗಿಗಳ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.

ಏನಿದು ಎಚ್‌1ಎನ್‌1 (H1N1) ವೈರಸ್‌ ?

ಎಚ್‌1ಎನ್‌1 (H1N1) ಅನ್ನೋದು Influenza A ವೈರಸ್‌ನ ಒಂದು ವಿಧ. ಇದನ್ನು ಸಾಮಾನ್ಯವಾಗಿ Swine Flu ಎಂದೂ ಕರೆಯಲಾಗುತ್ತದೆ. ಈ ಸೋಂಕು ಮುಖ್ಯವಾಗಿ ಉಸಿರಾಟದ ವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಎನ್‌1ಎನ್‌1 (H1N1) ಸೋಂಕು ಕಾಣಿಸಿಕೊಂಡಾಗ, ಸಾಮಾನ್ಯವಾಗಿ ಜ್ವರ, ಕೆಮ್ಮು, ಗಂಟಲು ನೋವು, ದೇಹದಲ್ಲಿ ನೋವು ಮತ್ತು ಸುಸ್ತು ಸೇರಿದಂತೆ ಫ್ಲೂ ರೀತಿಯ ಸಮಸ್ಯೆಗಳು ಕಂಡುಬರುತ್ತದೆ. ಇದರಿಂದಾಗಿ ಉಸಿರಾಟದ ಸಮಸ್ಯೆಯ ಮೇಲೆ ಗಂಭೀರ ಸ್ವರೂಪದ ಪರಿಣಾಮವೂ ಬೀರುವ ಸಾಧ್ಯತೆಯಿದೆ.

ಆದರೆ ಎಲ್ಲರಿಗೂ ಕೂಡ ಸೋಂಕಿನ ತೀವ್ರತೆ ಒಂದೇ ರೀತಿಯಾಗಿ ಇರೋದಿಲ್ಲ. ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ, ಎನ್‌1ಎನ್‌1 ಸ್ವಯಂ ನಿರ್ಧಾರ ಮಾಡಿಕೊಳ್ಳುವುದು ಸರಿಯಲ್ಲ. ಬದಲಾಗಿ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೆ ಒಳಪಡುವುದು ಅತೀ ಮುಖ್ಯ

ಎಚ್‌1ಎನ್‌1 (H1N1) ವೈರಸ್‌ನ ಪ್ರಮುಖ ಲಕ್ಷಣಗಳೇನು?

ಎಚ್‌1ಎನ್‌1 ವೈರಸ್‌ ಸೋಂಕಿನ ಲಕ್ಷಣ ಕಂಡು ಬಂದ್ರೆ, ಸಾಮಾನ್ಯವಾಗಿ ಎಲ್ಲರಲ್ಲಿಯೂ ಜ್ವರ, ನಿರಂತರ ಕೆಮ್ಮು, ಗಂಟಲು ನೋವು, ಮೂಗು ಕಟ್ಟುವುದು ಅಥವಾ ಮೂಗಿನಿಂದ ನೀರು ಬರುವುದು, ತಲೆನೋವು, ದೇಹದಲ್ಲಿ ನೋವು, ಅತಿಯಾದ ಸುಸ್ತು, ಕೆಲವರಲ್ಲಿ ವಾಂತಿ ಅಥವಾ ಅತಿಸಾರದ ಜೊತೆಗೆ ಮುಖ್ಯವಾಗಿ ಉಸಿರಾಟಕ್ಕೆ ತೊಂದರೆ ಆಗುವ ಲಕ್ಷಣಗಳು ಹೆಚ್ಚಾಗಲಿದೆ. ಅಲ್ಲದೇ ಜ್ವರ ಕಡಿಮೆಯಾಗದೆ ಮುಂದುವರಿದ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.

H1N1 : ಯಾರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ?

ಎನ್‌1ಎನ್‌1 ವೈರಸ್‌ ಎಲ್ಲರಿಗೂ ಕೂಡ ಒಂದೇ ರೀತಿಯಾದ ಪರಿಣಾಮ ಬೀರುವುದಿಲ್ಲ. ಮಕ್ಕಳು, ಗರ್ಭಿಣಿಯರು, ವೃದ್ದರು ಮತ್ತು ಕೆಲವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿ ಬರುತ್ತದೆ. ಜ್ವರ ಅಥವಾ ಉಸಿರಾಟದ ಲಕ್ಷಣಗಳನ್ನು ನಿರ್ಲಕ್ಷಿಸದೇ ವೈದ್ಯಕೀಯ ಸಲಹೆಯನ್ನು ಪಡೆಯುವುದು ಅತೀ ಉತ್ತಮ.

ಎನ್‌1ಎನ್‌1 (H1N1) ಹರಡುವುದನ್ನು ತಡೆಯಲು ಏನು ಮಾಡಬೇಕು?

ಎನ್‌1ಎನ್‌1 ಸೇರಿದಂತೆ ಉಸಿರಾಟದ ಸೋಂಕುಗಳಿಂದ ರಕ್ಷಿಸಿಕೊಳ್ಳಲು ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯ. ಸೋಂಕಿತರು ಇತರರಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಪ್ರಮುಖವಾಗಿ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು. ಕೈಗಳನ್ನು ನಿಯಮಿತವಾಗಿ ತೊಳೆಯುವುದು, ಅನಾರೋಗ್ಯದ ಸಂದರ್ಭದಲ್ಲಿ ಇತರರಿಂದ ಅಂತರ ಕಾಯ್ದುಕೊಳ್ಳುವುದು ಮತ್ತು ಅಗತ್ಯವಿದ್ದರೆ ಮಾಸ್ಕ್ ಬಳಸುವುದು ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಎನ್‌1ಎನ್‌1 ಬಗ್ಗೆ ಆತಂಕ ಪಡಬೇಕೇ?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿನ ಪ್ರಕರಣ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದ್ರೂ ಕೂಡ, ಎಲ್ಲರೂ ಕೂಡ ಗಂಭೀರ ಪರಿಸ್ಥಿತಿಗೆ ತಲುಪುವುದಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ವೈದ್ಯರ ಸಲಹೆಯಂತೆ ಮುನ್ನೆಚ್ಚರಿಕೆ ವಹಿಸುದು ತೀರಾ ಮುಖ್ಯ. ಅದ್ರಲ್ಲೂ ತೀವ್ರ ತೆರನಾದ ರೋಗ ಲಕ್ಷಣಗಳಿದ್ರೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯ.