ಗ್ರಾಹಕರಿಗೆ ಬಿಗ್​ ಶಾಕ್​ : ಸಾಲದ ಬಡ್ಡಿ ದರ ಶೇ.0.25ರಷ್ಟು ಏರಿಕೆ ಸಾಧ್ಯತೆ!

ಮಾರುಕಟ್ಟೆಯ ತಜ್ಞರ ಅಂದಾಜಿನ ಪ್ರಕಾರ, ಈ ಬಾರಿ ರೆಪೋ ದರದಲ್ಲಿ ಕನಿಷ್ಠ ಶೇಕಡಾ 0.25 ರಷ್ಟು ಹೆಚ್ಚಳವಾಗುವ ಲಕ್ಷಣಗಳು ದಟ್ಟವಾಗಿವೆ.

By ರಶ್ಮಿ ಎಸ್. | Rashmi S

1 min read

WhatsAppPost
bank loan interest rate hike rbi repo rate emi impact
bank loan interest rate hike rbi repo rate emi impact

ದೇಶದ ಬ್ಯಾಂಕಿಂಗ್ ಕ್ಷೇತ್ರ ಹಾಗೂ ಜನಸಾಮಾನ್ಯರ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಬಲ್ಲ ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಮೂರೂವರೆ ವರ್ಷಗಳ ಸುದೀರ್ಘ ಅವಧಿಯ ನಂತರ ಮೊದಲ ಬಾರಿಗೆ ಸಾಲದ ಬಡ್ಡಿ ದರವನ್ನು ಹೆಚ್ಚಿಸಲು ಸಜ್ಜಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ತಲ್ಲಣಗಳು ಹಾಗೂ ದೇಶಿಯವಾಗಿ ನಿಯಂತ್ರಣಕ್ಕೆ ಸಿಗದಂತೆ ಏರಿಕೆಯಾಗುತ್ತಿರುವ ಚಿಲ್ಲರೆ ಹಣದುಬ್ಬರವನ್ನು ಹದ್ದುಬಸ್ತಿನಲ್ಲಿಡಲು ಕೇಂದ್ರ ಬ್ಯಾಂಕ್ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದೆ ಎಂದು ಆರ್ಥಿಕ ವಲಯದ ಮೂಲಗಳು ಮುನ್ಸೂಚನೆ ನೀಡಿವೆ.

ಇದೇ ವಾರ ನಡೆಯಲಿರುವ ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಉನ್ನತ ಮಟ್ಟದ ದ್ವೈಮಾಸಿಕ ಪರಾಮರ್ಶನಾ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಮಾರುಕಟ್ಟೆಯ ತಜ್ಞರ ಅಂದಾಜಿನ ಪ್ರಕಾರ, ಈ ಬಾರಿ ರೆಪೋ ದರದಲ್ಲಿ ಕನಿಷ್ಠ ಶೇಕಡಾ 0.25 ರಷ್ಟು ಹೆಚ್ಚಳವಾಗುವ ಲಕ್ಷಣಗಳು ದಟ್ಟವಾಗಿವೆ.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆದು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಆರ್‌ಬಿಐ ಗವರ್ನರ್ ನೇತೃತ್ವದ ಸಮಿತಿಯು ಬಡ್ಡಿ ದರ ಏರಿಕೆಯ ಅಸ್ತ್ರವನ್ನು ಬಳಸಲು ಗಂಭೀರವಾಗಿ ಯೋಚಿಸುತ್ತಿದೆ.

ಈ ಸಂಭಾವ್ಯ ನಿರ್ಧಾರವು ಜಾರಿಗೆ ಬಂದಲ್ಲಿ ಮಧ್ಯಮ ವರ್ಗದ ಗ್ರಾಹಕರ ಜೇಬಿಗೆ ನೇರವಾಗಿ ಕತ್ತರಿ ಬೀಳಲಿದೆ. ವಾಣಿಜ್ಯ ಬ್ಯಾಂಕುಗಳು ತಮಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಹೊರೆ ಹೆಚ್ಚಾಗುತ್ತಿದ್ದಂತೆ, ಅದನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸಲಿವೆ. ಪರಿಣಾಮವಾಗಿ, ಬ್ಯಾಂಕುಗಳಿಂದ ಪಡೆದಿರುವ ಗೃಹ ಸಾಲ , ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಮಾಸಿಕ ಕಂತುಗಳ ಮೊತ್ತ ಗಣನೀಯವಾಗಿ ದುಬಾರಿಯಾಗಲಿದೆ.

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಇದು ಮತ್ತೊಂದು ಆರ್ಥಕ ಹೊರೆಯಾಗಿ ಪರಿಣಮಿಸಲಿದೆ. ಆದರೆ, ಇದೇ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಹಣ ಠೇವಣಿ ಇಡುವ ಹೂಡಿಕೆದಾರರಿಗೆ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರಗಳು ಹೆಚ್ಚಳವಾಗುವ ಮೂಲಕ ಅಲ್ಪ ನಿರಾಳತೆ ಸಿಗುವ ಸಾಧ್ಯತೆಯೂ ಇದೆ.

Topics

ಸಂಬಂಧಿತ ಸುದ್ದಿಗಳು