ಐಪಿಎಲ್ 2027ಕ್ಕೆ ದಿನಗಣನೆ ಶುರುವಾಗಿದೆ. ಈ ನಡುವಲ್ಲೇ ಬಿಸಿಸಿಐ ಐಪಿಎಲ್ ಮಿನಿ ಹರಾಜಿಗೆ ದಿನಾಂಕವನ್ನು ನಿಗದಿ ಮಾಡಿದೆ. ಮೂರು ವರ್ಷಗಳ ಬಳಿಕ ಭಾರತದಲ್ಲಿ ಐಪಿಎಲ್ ಹರಾಜು ನಡೆಯುತ್ತಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ಈ ಬಾರಿ ಐಪಿಎಲ್ ಮಿನಿ ಹರಾಜು ನಡೆಯಲಿದ್ದು, ಬಿಸಿಸಿಐ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ.
ಐಪಿಎಲ್ ಮಿನಿ ಹರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಬಿಸಿಸಿಐ ಎಲ್ಲಾ 10 ಪ್ರಾಂಚೈಸಿಗಳಿಗೆ ಮಾಹಿತಿಯನ್ನು ರವಾನಿಸಿದೆ. ಕಳೆದ ಮೂರು ವರ್ಷಗಳ ಕಾಲ ನಾನಾ ಕಾರಣದಿಂದಾಗಿ ಐಪಿಎಲ್ ಹರಾಜು ವಿದೇಶದಲ್ಲಿ ನಡೆದಿತ್ತು.
ಆದರೆ ಈ ಬಾರಿ ಭಾರತದಲ್ಲಿ ಹರಾಜು ನಡೆಸೋದಕ್ಕೆ ಮುಂದಾಗಿದ್ದು, ಇದಕ್ಕಾಗಿ ಗೋವಾದ ಐಟಿಸಿ ಗ್ರ್ಯಾಂಡ್ 5-ಸ್ಟಾರ್ ಹೋಟೆಲ್ನಲ್ಲಿ ಸ್ಥಳವನ್ನು ನಿಗದಿ ಮಾಡಿದೆ.
ಐಪಿಎಲ್ 2027ಕ್ಕೆ ತಂಡಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದು, ತಂಡಗಳು ಆಟಗಾರರ ವರ್ಗಾವಣೆ ಕಾರ್ಯ ನಡೆಸುತ್ತಿವೆ. ಮಿನಿ ಹರಾಜಿಗೆ ಮೊದಲು ತಂಡದಿಂದ ಕೈಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ.
ಮತ್ತೊಂದೆಡೆಯಲ್ಲಿ ತಂಡದ ಆಟಗಾರರ ಜೊತೆಗೆ ಕೋಚ್, ಸಹಾಯಕ ಸಿಬ್ಬಂದಿಗಳ ಬದಲಾವಣೆ ಕಾರ್ಯವನ್ನೂ ನಡೆಸಲಾಗುತ್ತಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ಯಾವೆಲ್ಲಾ ಆಟಗಾರರು ಪಾಲ್ಗೊಳ್ಳುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.