ಕೇದಾರನಾಥ : ಭೂಕುಸಿತದಿಂದಾಗಿ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಸಿಲುಕಿದ್ದ ಸುಮಾರು 1500 ಯಾತ್ರಾರ್ಥಿಗಳನ್ನು ರಕ್ಷಣಾ ತಂಡ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ನಿಂತರವಾಗಿ ಸುರಿದ ಬಾರೀ ಮಳೆಯಿಂದಾಗಿ ಚಾರ್ ಧಾಮ್ ಯಾತ್ರೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಬಾರೀ ಮಳೆಯಿಂದಾಗಿ ನಿರಂತರವಾಗಿ ಕಲ್ಲುಗಳು ಉರುಳುತ್ತಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.
ಭಾನುವಾರ ತಡರಾತ್ರಿ ಭೂಕುಸಿತ ಉಂಟಾಗಿದ್ದು, ಸುಮಾರು 1500ಕ್ಕೂ ಅಧಿಕ ಕೇದಾರನಾಥ ಯಾತ್ರಾರ್ಥಿಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪಡೆ (DDRF) ಜಂಟಿ ಕಾರ್ಯಾಚರಣೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಿದೆ ಎಂದು ಎಸ್‌ಡಿಆರ್‌ಎಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸಿದ್ದ ಪುಣ್ಯಕ್ಷೇತ್ರವಾಗಿರುವ ಗೌರಿ ಕುಂಡದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ಇರುವ ಚಿರ್ಬಾಸಾ ಪ್ರದೇಶದ ಮಾರ್ಗದ ಮತ್ತೊಂದು ತುಡಿಯಲ್ಲಿ ಭೂಕುಸಿತ ಉಂಟಾಗಿತ್ತು. ಮಾಹಿತಿ ತಿಳಿದ ಸೋನ್ ಪ್ರಯಾಗ ಠಾಣೆಯ ಪೊಲೀಸರ್ ಕೂಡ ಕಾರ್ಯಾಚರಣೆಗೆ ಇಳಿದಿದ್ದರು. ಸಬ್-ಇನ್ಸ್‌ಪೆಕ್ಟರ್ ಆಶಿಶ್ ಡಿಮ್ರಿ ನೇತೃತ್ವದ ಸೋನ್‌ಪ್ರಯಾಗದ SDRF ತಂಡವು ಸ್ಥಳಕ್ಕೆ ಆಗಮಿಸಿತು.
ಬೆಟ್ಟದ ಇಳಿಜಾರು ಪ್ರದೇಶದಿಂದ ನಿರಂತರವಾಗಿ ಬಂಡೆಗಳು ಉರುಳಿ ಬೀಳುತ್ತಿವೆ. ಇದರಿಂದಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಡಿಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಭೂಕುಸಿತದಲ್ಲಿ ಸಿಲುಕಿದ್ದ ಎಲ್ಲಾ ಯಾತ್ರಿಕರನ್ನು ಸುರಕ್ಷಿತವಾಗಿ ಗೌರಿ ಕುಂಡ್‌ಗೆ ಕಳುಹಿಸಿ ಕೊಡಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಉತ್ತರಾಖಂಡ್‌ದಲ್ಲಿ ಚಾರ್ ಧಾಮ್ ಯಾತ್ರೆಯನ್ನು ಸತತ ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ.