ಮಕ್ಕಳಿಗೆ ಕೆಮ್ಮಿನ ಸಿರಪ್​ ಜೀವಕ್ಕೇ ಅಪಾಯ : ಕೇಂದ್ರದಿಂದ ಹೊಸ ನಿಯಮ

ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವ ಸಲುವಾಗಿ ಸರ್ಕಾರವು 'ಔಷಧ ನಿಯಮಗಳು, 1945ಕ್ಕೆ ಮಹತ್ವದ ತಿದ್ದುಪಡಿ ತರಲು ಮುಂದಾಗಿದೆ.

By ರಶ್ಮಿ ಎಸ್. | Rashmi S

1 min read

WhatsAppPost
central govt cough syrup ban rules children health warning
central govt cough syrup ban rules children health warning

ಸಣ್ಣ ಮಕ್ಕಳಿಗೆ ನೆಗಡಿ, ಕೆಮ್ಮು ಅಥವಾ ಜ್ವರದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಸಲಹೆ ಪಡೆಯದೇ ನೇರವಾಗಿ ಮೆಡಿಕಲ್ ಶಾಪ್‌ಗಳಿಂದ ಕೆಮ್ಮಿನ ಸಿರಪ್ ತಂದು ಕುಡಿಸುವ ಪೋಷಕರಿಗೆ ಕೇಂದ್ರ ಸರ್ಕಾರವು ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುಟ್ಟ ಮಕ್ಕಳಿಗೆ ಇಂತಹ ಸಿರಪ್‌ಗಳನ್ನು ನೀಡುವುದು ಅತ್ಯಂತ ಅಪಾಯಕಾರಿ ಹಾಗೂ ಅವರ ಜೀವಕ್ಕೇ ಆಪತ್ತು ತರಬಹುದು ಎಂದು ಭಾರತೀಯ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಗಂಭೀರವಾಗಿ ಹೇಳಿದೆ.

ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವ ಸಲುವಾಗಿ ಸರ್ಕಾರವು 'ಔಷಧ ನಿಯಮಗಳು, 1945ಕ್ಕೆ ಮಹತ್ವದ ತಿದ್ದುಪಡಿ ತರಲು ಮುಂದಾಗಿದೆ. ಹೊಸ ನಿಯಮದ ಪ್ರಕಾರ, ಇನ್ಮುಂದೆ ಮಾರುಕಟ್ಟೆಗೆ ಬರುವ ಪ್ರತಿಯೊಂದು ಕೆಮ್ಮಿನ ಸಿರಪ್ ಬಾಟಲಿಯ ಲೇಬಲ್ ಮೇಲೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಸಿರಪ್ ಬಳಸಬಾರದು ಎಂಬ ಬರಹವನ್ನು ಕೆಂಪು ಬಣ್ಣದಲ್ಲಿ ಪ್ರಮುಖವಾಗಿ ಮುದ್ರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಓದಲು ಬಾರದ ಸಾಮಾನ್ಯ ಜನರಿಗೂ ಇದು ಸುಲಭವಾಗಿ ಮನವರಿಕೆಯಾಗುವಂತೆ ಶಾಲಾ ವಯಸ್ಸಿನ ಮಕ್ಕಳ ಚಿತ್ರಗಳನ್ನು ಲೇಬಲ್ ಮೇಲೆ ಬಳಸಲು ಪ್ರಸ್ತಾಪಿಸಲಾಗಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಪುಟ್ಟ ಮಕ್ಕಳ ಶ್ವಾಸಕೋಶ ಹಾಗೂ ಇಡೀ ಉಸಿರಾಟದ ವ್ಯವಸ್ಥೆಯು ಅತ್ಯಂತ ಸೂಕ್ಷ್ಮ ಹಂತದಲ್ಲಿರುತ್ತದೆ. ಈ ಸಿರಪ್‌ಗಳಲ್ಲಿ ಬಳಸಲಾಗುವ ತೀವ್ರ ಗಾಢತೆಯ ರಾಸಾಯನಿಕಗಳು ಮಕ್ಕಳಲ್ಲಿ ಅತಿಯಾದ ಮಂಪರು, ತೀವ್ರ ಉಸಿರಾಟದ ತೊಂದರೆ ಮತ್ತು ಪ್ರಾಣಾಪಾಯದಂತಹ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಈ ಹಿಂದೆ ಇಲಾಖೆಯು ಹತ್ತಾರು ಜಾಗೃತಿ ಮೂಡಿಸಿದ್ದರೂ ಪೋಷಕರು ಸ್ವಯಂ ಔಷಧೋಪಚಾರ ಮುಂದುವರಿಸಿದ್ದರಿಂದ ಕೇಂದ್ರ ಸರ್ಕಾರ ಈ ಕಠಿಣ ಹೆಜ್ಜೆ ಇಟ್ಟಿದೆ. ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಔಷಧಿ ನೀಡುವ ಮುನ್ನ ಭೌತಿಕ ಲೇಬಲ್ ಅನ್ನು ಕಡ್ಡಾಯವಾಗಿ ಪರಿಶೀಲಿಸಿ, ವೈದ್ಯರ ಮಾರ್ಗದರ್ಶನ ಪಡೆಯುವುದು ಅತ್ಯಗತ್ಯವಾಗಿದೆ.

Topics

ಸಂಬಂಧಿತ ಸುದ್ದಿಗಳು