Kannada News Next

india

ನವರಾತ್ರಿ ಗಿಫ್ಟ್: 137 ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಭಾರೀ ಇಳಿಕೆ; ನ.9ರಿಂದ ಹೊಸ ದರ ಜಾರಿ

ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA)

By ಅನಿಲ್‌ ಗುಂಡ್ಮಿ | Anil Gundmi
Navaratri Gift Massive price reduction for 137 cancer drugs new rates effective from Nov 9

ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಸಾರ್ವಜನಿಕ ಹಿತದೃಷ್ಟಿಯಿಂದ 137 ನಾನ್-ಶೆಡ್ಯೂಲ್ಡ್ ಕ್ಯಾನ್ಸರ್‌ ವಿರೋಧಿ ಔಷಧಿಗಳ (Anti-Cancer Drugs) ಮೇಲಿನ ವ್ಯಾಪಾರ ಮಾರ್ಜಿನ್ (Trade Margin) ಅನ್ನು ಗರಿಷ್ಠ 30%ಕ್ಕೆ ಮಿತಿಗೊಳಿಸಿದೆ.

ಈ ಕ್ರಮದಿಂದ ಈಗಿನ ಬೆಲೆ ರಚನೆಗೆ ಅನುಗುಣವಾಗಿ ಕೆಲವು ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) 70%ರವರೆಗೆ ಇಳಿಯುವ ಸಾಧ್ಯತೆ ಇದೆ. ಅತಿಯಾದ ವ್ಯಾಪಾರ ಮಾರ್ಜಿನ್‌ಗಳನ್ನು ನಿಯಂತ್ರಿಸುವುದು, ಕ್ಯಾನ್ಸರ್ ಔಷಧಿಗಳನ್ನು ಸಾಮಾನ್ಯ ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡುವುದು ಹಾಗೂ ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಈ ಕ್ರಮವು 2019ರಲ್ಲಿ ಎನ್‌ಪಿಪಿಎ ಕೈಗೊಂಡಿದ್ದ ಟ್ರೇಡ್ ಮಾರ್ಜಿನ್ ರೇಷನಲೈಸೇಷನ್ (TMR) ಯೋಜನೆಯ ಮುಂದುವರಿದ ಭಾಗವಾಗಿದೆ. ಆಗ 42 ಕ್ಯಾನ್ಸರ್ ಔಷಧಿಗಳ ವ್ಯಾಪಾರ ಮಾರ್ಜಿನ್ ಅನ್ನು 30%ಕ್ಕೆ ಮಿತಿಗೊಳಿಸಲಾಗಿತ್ತು, ಇದರಿಂದ 526 ಬ್ರಾಂಡ್‌ಗಳ ಔಷಧಿಗಳ MRP 90%ರವರೆಗೆ ಇಳಿಕೆಯಾಗಿತ್ತು.

ಈ ಬಾರಿ ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವಿಸಸ್ (DGHS) ಅಡಿಯಲ್ಲಿ ರಚಿಸಲಾದ ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ 137 ಔಷಧಿಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಈ ಸಮಿತಿಯಲ್ಲಿ ಖ್ಯಾತ ಆಂಕಾಲಜಿಸ್ಟ್‌ಗಳು, ವೈದ್ಯಕೀಯ ತಜ್ಞರು, ಆಸ್ಪತ್ರೆಗಳ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಇದ್ದರು. ಅಗತ್ಯಕ್ಕೆ ಅನುಗುಣವಾಗಿ ಈ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು.

ಗೆಜೆಟ್ ಅಧಿಸೂಚನೆ ಪ್ರಕಟವಾದ ಏಳು ದಿನಗಳೊಳಗೆ ಎಲ್ಲಾ ಔಷಧ ತಯಾರಕರು ತಮ್ಮ ಪರಿಷ್ಕೃತ ದರಗಳನ್ನು ಎನ್‌ಪಿಪಿಎಗೆ ಸಲ್ಲಿಸಬೇಕು. ಹೊಸ ಬೆಲೆಗಳು 2026ರ ನವೆಂಬರ್ 9ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.

ತಯಾರಕರು ತಮ್ಮ ಪರಿಷ್ಕೃತ ಬೆಲೆಪಟ್ಟಿಯನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದರ ಜೊತೆಗೆ ಚಿಲ್ಲರೆ ಮಾರಾಟಗಾರರು ಹಾಗೂ ಆಸ್ಪತ್ರೆಗಳಿಗೆ ತಲುಪಿಸಬೇಕು.

ಆಸ್ಪತ್ರೆಗಳು ಮತ್ತು ಔಷಧ ಅಂಗಡಿಗಳು ನವೆಂಬರ್ 9ರಿಂದ ಹೊಸ ದರದಲ್ಲಿಯೇ ಔಷಧಿಗಳನ್ನು ಮಾರಾಟ ಮಾಡಬೇಕು ಹಾಗೂ ಪರಿಷ್ಕೃತ ಬೆಲೆಪಟ್ಟಿಯನ್ನು ಸಾರ್ವಜನಿಕರ ಗಮನಕ್ಕೆ ಪ್ರದರ್ಶಿಸಬೇಕು. ಗ್ರಾಹಕರು Pharma Sahi Daam ಆ್ಯಪ್ ಹಾಗೂ ಎನ್‌ಪಿಪಿಎ ವೆಬ್‌ಸೈಟ್ ಮೂಲಕ ಹೊಸ ದರಗಳನ್ನು ಪರಿಶೀಲಿಸಬಹುದು.

ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಹಿತಿ:

ಅಕ್ಟೋಬರ್ 12ರಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಕ್ಯಾನ್ಸರ್ ಔಷಧಿಗಳ ವ್ಯಾಪಾರ ಮಾರ್ಜಿನ್ ಅನ್ನು MRPಯ 30%ಕ್ಕೆ ಮಿತಿಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿತ್ತು. ಈ ವೇಳೆ ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಔಷಧ ಕಂಪನಿಗಳ ಪೂರೈಕೆ ಬೆಲೆ ಮತ್ತು ಮುದ್ರಿತ MRP ನಡುವಿನ ಭಾರೀ ಅಂತರ ರೋಗಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ, ಔಷಧ ವಲಯದ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.

ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವ್ಯಾಪಾರ ಮಾರ್ಜಿನ್ ಮಿತಿಗೆ ಒಳಪಡುವ ಕ್ಯಾನ್ಸರ್ ಔಷಧಿಗಳ ಪ್ರತ್ಯೇಕ ಪಟ್ಟಿಯನ್ನು ಸರ್ಕಾರ ಅಧಿಸೂಚನೆ ಮೂಲಕ ಪ್ರಕಟಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು.