ರಾತ್ರಿಯ ವೇಳೆಯಲ್ಲಿ ಸೂರ್ಯ ಬೆಳಕನ್ನು ಕಾಣೋದಕ್ಕೆ ಸಿಗೋದಿಲ್ಲ. ಆದರೆ ಇನ್ಮುಂದೆ ಸೂರ್ಯನ ಬೆಳಕನ್ನು ರಾತ್ರಿಯ ಹೊತ್ತಲ್ಲಿ ಮಾರಾಟ ಮಾಡುವ ವಿನೂತನ ಯೋಜನೆಯೊಂದು ಜಾರಿಗೆ ಬರುತ್ತಿದೆ. ಹೈದ್ರಾಬಾದ್ನ ಖಾಸಗಿ ಕಂಪೆನಿಯ ಜೊತೆಗೆ ಸೂರ್ಯನ ಬೆಳಕಿಗಾಗಿ ಅಮೇರಿಕಾ ಒಪ್ಪಂದವನ್ನೂ ಮಾಡಿಕೊಂಡಿದೆ.
ರಾತ್ರಿಯ ಹೊತ್ತಲ್ಲಿ ಸೂರ್ಯನ ಬೆಳಕನ್ನು ಭೂಮಿಗೆ ನೀಡಬೇಕು ಅನ್ನೋ ಉದ್ದೇಶದಿಂದಲೇ ಹೈದ್ರಾಬಾದ್ನ ಸ್ಕೈರೂಟ್ ಏರೋಸ್ಪೇಸ್ ಕಂಪೆನಿಯ ಜೊತೆಗೆ ಅಮೇರಿಕಾ ಮೂಲದ ರಿಫ್ಲೆಕ್ಟ್ ಆರ್ಬಿಟಲ್ ಕಂಪನಿ ಒಪ್ಪಂದವನ್ನು ಮಾಡಿಕೊಂಡಿದೆ. ಭೂಕಕ್ಷೆಯಲ್ಲಿ ಉಪಗ್ರಹಗಳನ್ನು ಹಾರಿಬಿಟ್ಟು, ಅವುಗಳಿಂದ ಪ್ರತಿಫಲಿಸುವ ಫಲಕಗಳ ಮೂಲಕ ಸೂರ್ಯನ ಬೆಳಕನ್ನು ಬಳಸಿಕೊಂಡು, ರಾತ್ರಿಯ ಹೊತ್ತಲ್ಲಿ ಸೂರ್ಯನ ಬೆಳಕನ್ನು ಒದಗಿಸುವುದು ಈ ಯೋಜನೆಯ ಉದ್ದೇಶ.
ಪ್ರಾಕೃತಿಕ ವಿಕೋಪ, ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಉಂಟಾಗುವ ಬೆಳಕಿನ ಕೊರತೆಯನ್ನು ನೀಗಿಸುವುದಕ್ಕೆ ಈ ಯೋಜನೆ ಸಹಕಾರಿಯಾಗಲಿದೆ. ಸೂರ್ಯನ ಬೆಳಕನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ವಿಕ್ರಂ ರಾಕೆಟ್ ಬಳಸಿ, 2 ಉಪಗ್ರಹಗಳನ್ನು ಉಡ್ಡಯನ ಮಾಡಿದೆ. ಇದಕ್ಕಾಗಿ ಮೊದಲ ಬಾರಿಗೆ ಖಾಸಗಿ ರಾಕೆಟ್ ಪ್ರಯೋಗ ನಡೆಸಿ, ಹೈದ್ರಾಬಾದ್ನ ಸ್ಕೈರೂಟ್ ಏರೋಸ್ಪೇಸ್ ಕಂಪೆನಿ ಯಶಸ್ವಿ ಆಗಿದೆ ಎಂದು ಕಂಪೆನಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ನೀವು ಯಾವಾಗ ಬಯಸುತ್ತೀರೋ ಆವಾಗ, ಎಷ್ಟು ಬೆಳಕು ಬೇಕೋ ಅಷ್ಟು ಸೂರ್ಯನ ಬೆಳಕನ್ನು ನೀವು ಪಡೆಯಬಹುದು. ಗರಿಷ್ಠ 5 ಕಿಲೋ ಮೀಟರ್ ವ್ಯಾಪ್ತಿಯ ವರೆಗೆ ಕೂಡ ಸೂರ್ಯ ಬೆಳಕು ಪಡೆಯೋದಕ್ಕೆ ಈ ಯೋಜನೆ ಸಹಕಾರಿಯಾಗಲಿದೆ. ಸೂರ್ಯನ ಬೆಳಕು ಬಾಡಿಗೆಗೆ ಸಿಕ್ಕರೆ, ರಕ್ಷಣಾ ಕಾರ್ಯದ ಜೊತೆಗೆ ಸೋಲಾರ್ ಪಾರ್ಕ್ನಲ್ಲಿ ರಾತ್ರಿಯ ಹೊತ್ತಿನಲ್ಲೂ ವಿದ್ಯುತ್ ಉತ್ಪಾದನೆಗಾಗಿ ಈ ಬೆಳಕನ್ನು ಪಡೆಯಬಹುದಾಗಿದೆ.