ಸೆಪ್ಟೆಂಬರ್​ 15ರಿಂದ ವಿತರಣೆಯಾಗಲಿದೆ ಬಂಗಾರ : ತಮಿಳುನಾಡು ಸರ್ಕಾರದಿಂದ ಬಂಪರ್​ ಕೊಡುಗೆ

ಚುನಾವಣೆಯಲ್ಲಿ ಜಯಭೇರಿ ಬಾರಿಸಿ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ವಿಜಯ್​ ಇದೀಗ ತಾವು ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗಿದ್ದಾರೆ.

By ರಶ್ಮಿ ಎಸ್. | Rashmi S

1 min read

WhatsAppPost
tamil nadu government welfare scheme gold distribution
tamil nadu government welfare scheme gold distribution

ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ತಮಳಿಗ ವೇಟ್ರಿ ಕಳಗಂ ಪಕ್ಷದ ನಾಯಕ ಸಿ. ಜೊಸೇಫ್​ ವಿಜಯ್​ ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ ಚಿನ್ನದ ಉಂಗುರ ತೊಡಿಸುವ ಭರವಸೆ ನೀಡಿದ್ದರು. ಥಾಯ್ಮಾಮನ್ ಚಿನ್ನದ ಉಂಗುರ ಯೋಜನೆಯು ವಿಜಯ್​ ಅವರ ಪ್ರಮುಖ ಚುನಾವಣಾ ಪ್ರಣಾಳಿಕೆಯ ಪೈಕಿ ಒಂದಾಗಿತ್ತು. ಚುನಾವಣೆಯಲ್ಲಿ ಜಯಭೇರಿ ಬಾರಿಸಿ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ವಿಜಯ್​ ಇದೀಗ ತಾವು ನೀಡಿದ್ದ ಭರವಸೆಯನ್ನು ಈಡೇರಿಸಲು ಮುಂದಾಗಿದ್ದಾರೆ.

ಹೌದು..! ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಯೋಜನೆಯ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದ ತಮಿಳುನಾಡು ಸಿಎಂ ವಿಜಯ್​, 755.83 ಕೋಟಿ ರೂಪಾಯಿ ಮೌಲ್ಯದ ಈ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಜನ್ಮದಿನದ ಅಂಗವಾಗಿ ಮುಂಬರುವ ಸೆಪ್ಟೆಂಬರ್ 15 ರಿಂದ ಈ ಮಹತ್ವಾಕಾಂಕ್ಷೆಯ ಯೋಜನೆಯು ರಾಜ್ಯಾದ್ಯಂತ ಅಧಿಕೃತವಾಗಿ ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದರು. ಇದೀಗ ಥಾಯ್ಮಾಮನ್ ಚಿನ್ನದ ಉಂಗುರ ಯೋಜನೆಯ ಅನುಷ್ಠಾನಕ್ಕೆ ಸಕಲ ತಯಾರಿಯನ್ನು ತಮಿಳುನಾಡು ಸರ್ಕಾರ ಆರಂಭಿಸಿದೆ.

ಈ ವಿಶೇಷ ಯೋಜನೆಗಾಗಿ ಸರ್ಕಾರವು ದೇಶದ ಅತ್ಯಂತ ಪ್ರತಿಷ್ಠಿತ ಚಿನ್ನದ ಆಭರಣ ಸಂಸ್ಥೆಗಳಾದ ಕಲ್ಯಾಣ್ ಜ್ಯುವೆಲ್ಲರ್ಸ್ ಮತ್ತು ಜಾಯ್ ಅಲುಕ್ಕಾಸ್ ಗ್ರೂಪ್‌ಗಳೊಂದಿಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಸುಮಾರು 1.28 ಲಕ್ಷಕ್ಕೂ ಅಧಿಕ ಅರ್ಹ ಶಿಶುಗಳಿಗೆ ಈ ಚಿನ್ನದ ಉಂಗುರಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಜ್ಯುವೆಲ್ಲರ್ಸ್‌ ಸಂಸ್ಥೆಗಳು ಕೇವಲ ಒಂದು ಪೈಸೆ ಮೇಕಿಂಗ್ ಚಾರ್ಜ್ ಪಡೆದು ಗುಣಮಟ್ಟದ ಆಭರಣಗಳನ್ನು ಪೂರೈಸಲು ಸಮ್ಮತಿಸಿವೆ. ಈ ಯೋಜನೆಯ ಸಂಪೂರ್ಣ ಉಸ್ತುವಾರಿಯನ್ನು ಮತ್ತು ಟೆಂಡರ್ ಪ್ರಕ್ರಿಯೆಯನ್ನು ಸಾಗರೋತ್ತರ ತಮಿಳರ ಕಲ್ಯಾಣ ಮತ್ತು ಉದ್ಯೋಗದ ಸಚಿವಾಲಯವು ಯಶಸ್ವಿಯಾಗಿ ನಿರ್ವಹಿಸಿದೆ.

ಬಡ ಕುಟುಂಬಗಳಲ್ಲಿ ಮಗು ಜನಿಸಿದಾಗ ಆರ್ಥಿಕ ಭದ್ರತೆ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದನ್ನು ತಪ್ಪಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಹಾಗೂ ಸುರಕ್ಷಿತ ಹೆರಿಗೆ ಸೇವೆಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಇದು ಪರೋಕ್ಷವಾಗಿ ಸಹಕಾರಿಯಾಗಲಿದೆ ಎಂದು ತಮಿಳುನಾಡು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

Topics

ಸಂಬಂಧಿತ ಸುದ್ದಿಗಳು