ನವದೆಹಲಿ : ಭಾರತೀಯ ರೈಲ್ವೆ ಇಲಾಖೆಯು ಕ್ರಾಂತಿಕಾರಿ ಹೆಜ್ಜೆ ಇರಿಸಲು ಮುಂದಾಗಿದೆ. ಈಗಾಗಲೇ 16 ಕೋಚ್‌ಗಳ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಿರುವ ಬೆನ್ನಲ್ಲೇ ಇದೀಗ ಬರೋಬ್ಬರಿ 24 ಕೋಚುಗಳನ್ನು ಹೊಂದಿರುವ ರೈಲನ್ನು ಪರಿಚಯಿಸಲು ರೈಲ್ವೆ ಮಂಡಳಿಯು ಸಿದ್ದತೆ ನಡೆಸಿದೆ.
ಚೆನ್ನೈನ ಪ್ರತಿಷ್ಠಿತ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಹೈಟೆಕ್ ರೈಲು ನಿರ್ಮಾಣದ ಹೊಣೆಯನ್ನು ಹೊತ್ತಿದೆ. 24 ಕೋಚ್‌ಗಳ ರೈಲು ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಹೈಟೆಕ್ ಸೌಲಭ್ಯವನ್ನು ಒಳಗೊಂಡಿರಲಿದೆ. 2027ರ ಜೂನ್ ಅಂತ್ಯದ ಒಳಗೆ ಈ ರೈಲು ಹಳಿಗೆ ಇಳಿಯಲಿದೆ.
ರಾಜಧಾನಿ ಎಕ್ಸ್‌ಪ್ರೆಸ್‌ಗಿಂತಲೂ ಅತ್ಯಾಧುನಿಕ ಸೌಲಭ್ಯ
ಭಾರತದಲ್ಲಿ ಅತೀ ವೇಗದ ರೈಲುಗಳಲ್ಲಿ ಒಂದಾಗಿರುವ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿವೆ. ಆದರೆ 24 ಕೋಚ್‌ಗಳ ವಂದೇ ಭಾರತ್ ಸ್ಲೀಪರ್ ರೈಲು ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗಿಂತಲೂ ಹೆಚ್ಚು ಹೈಟೆಕ್ ಆಗಿರಲಿದೆ. ಅತ್ಯಂತ ದೂರದ ಪ್ರಯಾಣವು ಸುಖಕರವಾಗಿ ಇರಬೇಕು ಅನ್ನೋ ಕಾರಣಕ್ಕೆ ಯುರೋಪಿಯನ್ ರೈಲುಗಳ ಮಾದರಿಯಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ.
ವಂದೇ ಭಾರತ್ 24 ಕೋಚ್ ರೈಲಿನಲ್ಲೇನಿದೆ ?
ಈಗಾಗಲೇ ಸಂಚಾರ ನಡೆಸುತ್ತಿರುವ ವಂದೇ ಭಾರತ್ 16 ಕೋಚ್ ಮಾದರಿಯ ರೈಲಿಗಿಂತಲೂ ಹೆಚ್ಚು ಹೈಟೆಕ್ ಸೌಲಭ್ಯ ಒದಗಿಸಲಾಗಿದೆ. 24 ಕೋಚ್‌ನ ಹೊಸ ರೈಲಿನಲ್ಲಿ ಪ್ಯಾಂಟ್ರಿ ಕಾರ್ ಅಳವಡಿಸಲಾಗಿದೆ. ಇದರಿಂದಾಗಿ ಪ್ರಯಾಣದ ವೇಳೆಯಲ್ಲಿ ಪ್ರಯಾಣಿಕರಿಗೆ ಬಿಸಿ ಬಿಸಿ ಆಹಾರವನ್ನು ಒದಗಿಸುವುದಕ್ಕೆ ಅನುಕೂಲಕರವಾಗಲಿದೆ.
ಹೈಟೆಕ್ ಶೌಚಾಲಯ, ಶವರ್ ಸೌಲಭ್ಯ
ವಿಮಾನಗಳಲ್ಲಿ ಇರುವಂತೆ ವಂದೇ ಭಾರತ್ 24 ಕೋಚ್ ರೈಲಿನಲ್ಲಿ ವ್ಯಾಕ್ಯೂಮ್ ಶೌಚಾಲಯವನ್ನು ಅಳವಡಿಸಲಾಗಿದೆ. ಅದ್ರಲ್ಲೂ ವಿಕಲಚೇತನರಿಗಾಗಿ ವಿಶೇಷ ಶೌಚಾಲಯ, ಬೇಬಿ ಕೇರ್ ಸ್ಟೇಷನ್ ಕೂಡ ಇರಲಿದೆ. ಅದ್ರಲ್ಲೂ ಪ್ರಥಮ ದರ್ಜೆ (AC First Class) ಕೋಚ್‌ನಲ್ಲಿ ಬಿಸಿ ನೀರಿನ ಜೊತೆಗೆ ಶವರ್ ವ್ಯವಸ್ಥೆ ಕೂಡ ಇರಲಿದೆ.
ಸುರಕ್ಷತಾ ಪ್ರಯಾಣ, ಅತ್ಯಂತ ವೇಗ
ವಂದೇ ಭಾರತ್ ರೈಲು ಈಗಾಗಲೇ ಅತೀ ವೇಗದಲ್ಲಿ ಸಂಚಾರ ನಡೆಸುತ್ತಿದೆ. ಆದರೆ ವಂದೇ ಭಾರತ್ 24 ಕೋಚ್‌ನ ರೈಲು ಒಂದು ಗಂಟೆಗೆ 160 ಕಿಲೋ ಮೀಟರ್‌ವೇಗವನ್ನು ಕ್ರಮಿಸುವ ಸಾಮಥ್ಯವನ್ನು ಒಳಗೊಂಡಿಲಿದೆ. ಅದ್ರಲ್ಲೂ ಈ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೇ 'ಕವಚ್' (KAVACH) ಡಿಕ್ಕಿ ನಿವಾರಕ ವ್ಯವಸ್ಥೆಯನ್ನು ಹೊಂದಿವೆ.
ರೈಲ್ವೆ ಇಲಾಖೆ ವಿಮಾನಗಳ ಮಾದರಿಯಲ್ಲಿಯೇ ಈ ರೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ರೈಲಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ರೀಡಿಂಗ್ ಲೈಟುಗ, ಸ್ವಯಂ ಚಾಲಿತ ಬಾಲಿಗಳ ವ್ಯವಸ್ಥೆ, ಸೆಂಟ್ರಲೈಸ್ಡ್ ಕೋಚ್ ಮಾನಿಟರಿಂಗ್ ಸಿಸ್ಟಮ್ ಜೊತೆಗೆ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.