Kannada News Next

karnataka

ಗ್ರಾಮ ಪಂಚಾಯತ್‌ಗಳಿಗೆ ಸದ್ಯಕ್ಕಿಲ್ಲ ಚುನಾವಣೆ : ಆಡಳಿತಾಧಿಕಾರಿಗಳ ಅವಧಿ 6 ತಿಂಗಳು ವಿಸ್ತರಣೆ

2020-25ನೇ ಸಾಲಿನ ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳ ಅಧಿಕಾರದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಡಳಿತಾಧಿಕಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.

By Arun Gundmi | ಅರುಣ್‌ ಗುಂಡ್ಮಿ Editor-in-Chief
gram panchayat elections postponed administrators term extended

ಬೆಂಗಳೂರು : ಕರ್ನಾಟಕದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ ಸದ್ಯಕ್ಕೆ ನಡೆಯೋದು ಅನುಮಾನ. ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣೆಗೆ ಸರಕಾರ ಸಿದ್ದತೆ ಮಾಡಿಕೊಳ್ಳುವಾಗಲೇ ಗ್ರಾಮ ಪಂಚಾಯತ್‌ಗೆ ನೇಮಕ ಮಾಡಿದ್ದ ಆಡಳಿತಾಧಿಕಾರಿಗಳ ಅವಧಿಯನ್ನು ಇದೀಗ 6 ತಿಂಗಳು ವಿಸ್ತರಣೆ ಮಾಡಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 321ರ ಅಡಿಯಲ್ಲಿ ರಾಜ್ಯ ಸರಕಾರಗಳಿಗೆ ಇರುವ ಅಧಿಕಾರವನ್ನು ಬಳಸಿಕೊಂಡು, ಕಾಯ್ದೆಯ ಪ್ರಕರಣ 8 (2)ರ ಅಡಿಯಲ್ಲಿ ಆಡಳಿತಾಧಿಕಾರಿಗಳ ಅಧಿಕಾರದ ಅವಧಿಯನ್ನು ವಿಸ್ತರಣೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.

ಗ್ರಾಮ ಪಂಚಾಯತ್‌ಗಳ ಆಡಳಿತಾಧಿಕಾರಿಗಳ ಅವಧಿ ವಿಸ್ತರಣೆಯ ಬೆನ್ನಲ್ಲೇ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯೋದು ಮತ್ತಷ್ಟು ವಿಳಂಭವಾಗಲಿದೆ. 2020-25ನೇ ಸಾಲಿನ ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳ ಅಧಿಕಾರದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಡಳಿತಾಧಿಕಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಗ್ರಾಮ ಪಂಚಾಯತ್‌ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಅಧಿಕಾರವನ್ನು ವಿಸ್ತರಣೆ ಮಾಡಲಾಗಿದೆ.

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯದೇ ಹಲವು ವರ್ಷಗಳೇ ಕಳೆದಿದೆ. ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ರಾಜ್ಯ ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಆದರೆ ಈ ಬಾರಿ ಗ್ರಾಮ ಪಂಚಾಯತ್‌ ಚುನಾವಣೆ ನಡೆಯೋದು ಅನುಮಾನ, ಹೀಗಾಗಿ ಈಗಾಗಲೇ 6 ತಿಂಗಳು ವಿಸ್ತರಣೆ ಮಾಡಿದ್ದ, ಗ್ರಾಮ ಪಂಚಾಯತ್‌ ಆಡಳಿತಾಧಿಕಾರಿಗಳ ಅವಧಿಯನ್ನು ಇದೀಗ ಮತ್ತೆ 6 ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.