ಮತಾಂತರವಾದರೆ ಮೀಸಲಾತಿ ಗೋವಿಂದ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮತಾಂತರದ ನಂತರ ಹಿಂದಿನ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಮುಂದುವರಿಸಿಕೊಂಡು ಹೋಗಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

By ರಶ್ಮಿ ಎಸ್. | Rashmi S

1 min read

WhatsAppPost
religious conversion reservation loss supreme court judgment
religious conversion reservation loss supreme court judgment

ಹಿಂದುಳಿದ ವರ್ಗಕ್ಕೆ ಸೇರಿದ ಹಿಂದೂ ವ್ಯಕ್ತಿಯೊಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ, ಅವರು ತಮ್ಮ ಹಳೆಯ ಜಾತಿಯ ಆಧಾರದ ಮೇಲೆ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮತಾಂತರದ ನಂತರ ಹಿಂದಿನ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಮುಂದುವರಿಸಿಕೊಂಡು ಹೋಗಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಈ ಹಿಂದೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರ ನ್ಯಾಯಪೀಠವು ಎತ್ತಿಹಿಡಿದಿದೆ.

ತಮಿಳುನಾಡು ಸರ್ಕಾರವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಸಂವಿಧಾನದ 16(4)ನೇ ವಿಧಿಯನ್ನು ಉಲ್ಲೇಖಿಸಿ ಕೆಲವು ಪ್ರಮುಖ ಅಂಶಗಳನ್ನು ವಿವರಿಸಿದೆ.

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮಗಳಿಗೆ ಮತಾಂತರ ಹೊಂದುವ ವ್ಯಕ್ತಿಗಳು ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಕೇವಲ ಮತಾಂತರದ ಕಾರಣಕ್ಕಾಗಿ ಒಬ್ಬ ವ್ಯಕ್ತಿಯ ಹಳೆಯ ಸಾಮಾಜಿಕ ಸ್ಥಿತಿಯನ್ನು ಹೊಸ ಧರ್ಮದ ಹಿಂದುಳಿದ ವರ್ಗದ ಪಟ್ಟಿಗೆ ಸ್ವಯಂಚಾಲಿತವಾಗಿ ವರ್ಗಾಯಿಸಲು ಬರುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಇದೇ ವೇಳೆ ಘರ್ ವಾಪ್ಸಿ ಅಂದರೆ ಮರು ಮತಾಂತರದ ಮೂಲಕ ಮತ್ತೆ ಹಿಂದೂ ಧರ್ಮಕ್ಕೆ ಮರಳುವವರ ಮೀಸಲಾತಿ ಹಕ್ಕಿನ ಕುರಿತೂ ನ್ಯಾಯಾಲಯ ಸ್ಪಷ್ಟನೆ ನೀಡಿದೆ. ಒಬ್ಬ ವ್ಯಕ್ತಿ ಮರಳಿ ಸ್ವಧರ್ಮಕ್ಕೆ ಬಂದ ತಕ್ಷಣವೇ ಆತನಿಗೆ ಮೀಸಲಾತಿ ಹಕ್ಕುಗಳು ಸುಲಭವಾಗಿ ಸಿಗುವುದಿಲ್ಲ.

ಆತ ತನ್ನ ಮೂಲ ಜಾತಿಗೆ ಮರಳಿದ ನಂತರ, ಆ ಸಮುದಾಯವು ಆತನನ್ನು ಒಪ್ಪಿಕೊಂಡಿದೆಯೇ ಎಂಬುದನ್ನು ಸಕ್ಷಮ ಸರ್ಕಾರಿ ಪ್ರಾಧಿಕಾರವು ಪರಿಶೀಲಿಸಿ ದೃಢೀಕರಿಸುವುದು ಕಡ್ಡಾಯವಾಗಿದೆ. ಯಾವುದೇ ಖಾಸಗಿ ಅಥವಾ ಧಾರ್ಮಿಕ ಸಂಸ್ಥೆಗಳು ಇಂತಹ ಶಾಸನಬದ್ಧ ಹಕ್ಕುಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ. ಈ ತೀರ್ಪು ದೇಶಾದ್ಯಂತ ಮತಾಂತರ ಮತ್ತು ಮೀಸಲಾತಿ ನಿಯಮಗಳ ಮೇಲಿನ ಚರ್ಚೆಗೆ ಹೊಸ ಕಾನೂನು ಚೌಕಟ್ಟನ್ನು ಒದಗಿಸಿದೆ.

Topics

ಸಂಬಂಧಿತ ಸುದ್ದಿಗಳು