ಕೇಂದ್ರದ ನಿಯಮಕ್ಕೆ ರಾಜ್ಯ ಸರ್ಕಾರದ ಬ್ರೇಕ್ : ಸರ್ಕಾರಿ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಸುದೀರ್ಘ ಗಾಯನಕ್ಕೆ ಕತ್ತರಿ

ದೇಶಾದ್ಯಂತ ರಾಷ್ಟ್ರೀಯ ಗೀತೆಗಳ ಗಾಯನದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ‘ವಂದೇ ಮಾತರಂ’ ಗೀತೆಯ ಕುರಿತು ಮಹತ್ವದ ಹಾಗೂ ಹೊಸ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ

By ರಶ್ಮಿ ಎಸ್. | Rashmi S

1 min read

WhatsAppPost
karnataka-limits-vande-mataram-to-two-stanzas-in-state-events
karnataka-limits-vande-mataram-to-two-stanzas-in-state-events

ದೇಶಾದ್ಯಂತ ರಾಷ್ಟ್ರೀಯ ಗೀತೆಗಳ ಗಾಯನದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ‘ವಂದೇ ಮಾತರಂ’ ಗೀತೆಯ ಕುರಿತು ಮಹತ್ವದ ಹಾಗೂ ಹೊಸ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರಿ ಕಾರ್ಯಕ್ರಮಗಳು ಮತ್ತು ಅಧಿಕೃತ ಸಮಾರಂಭಗಳಲ್ಲಿ ಇನ್ಮುಂದೆ ವಂದೇ ಮಾತರಂ ಗೀತೆಯ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದು ಕಡ್ಡಾಯ ಎಂದು ಆದೇಶಿಸಲಾಗಿದೆ. ಕೇಂದ್ರ ಸರ್ಕಾರವು ಈ ಹಿಂದೆ ನೀಡಿದ್ದ ಸೂಚನೆಗಳನ್ನು ಬದಿಗೊತ್ತಿ ರಾಜ್ಯ ಸರ್ಕಾರ ಈ ಹೊಸ ತೀರ್ಮಾನ ಕೈಗೊಂಡಿದೆ.

ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ, ರಾಷ್ಟ್ರೀಯ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಅಥವಾ ಪ್ಲೇ ಮಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಈ ಹಿಂದೆ ರಾಜ್ಯಗಳಿಗೆ ಮಾರ್ಗದರ್ಶನ ನೀಡಿತ್ತು. ಆದರೆ, ಕೇಂದ್ರದ ಈ ನಿಯಮಕ್ಕೆ ಬ್ರೇಕ್ ಹಾಕಿರುವ ರಾಜ್ಯ ಸಚಿವ ಸಂಪುಟವು, ಸುದೀರ್ಘ ಗಾಯನಕ್ಕೆ ಕತ್ತರಿ ಹಾಕಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯಪಾಲರು ಭಾಗವಹಿಸುವ ಅತ್ಯುನ್ನತ ಮಟ್ಟದ ಅಧಿಕೃತ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಕೇವಲ ಎರಡು ಚರಣಗಳಷ್ಟೇ ಸೀಮಿತವಾಗಿರಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಈ ನಿರ್ಧಾರದ ಹಿಂದೆ ಐತಿಹಾಸಿಕ ಹಿನ್ನೆಲೆಯಿದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ. 1937ರಲ್ಲಿ ರವೀಂದ್ರನಾಥ ಟ್ಯಾಗೋರ್ ಸೇರಿದಂತೆ ಪ್ರಮುಖ ನಾಯಕರ ಮಾರ್ಗದರ್ಶನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯವನ್ನು ರಾಜ್ಯ ಸರ್ಕಾರ ಇಲ್ಲಿ ಆಧಾರವಾಗಿಟ್ಟುಕೊಂಡಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದರಿಂದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡಬಹುದು ಎಂಬ ಅಂದಿನ ತೀರ್ಮಾನಕ್ಕೆ ಈಗಿನ ಸರ್ಕಾರ ಬದ್ಧವಾಗಿದೆ.

ಒಟ್ಟಾರೆಯಾಗಿ, ಕೇಂದ್ರದ ಕಡ್ಡಾಯ ಆರು ಚರಣಗಳ ನಿಯಮವು ಪ್ರಾಯೋಗಿಕವಾಗಿ ಸುದೀರ್ಘವಾಗುತ್ತದೆ ಮತ್ತು ಐತಿಹಾಸಿಕ ಒಮ್ಮತಕ್ಕೆ ವಿರುದ್ಧವಾಗಿದೆ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಈ ಗೈಡ್‌ಲೈನ್ಸ್ ತಂದಿದೆ. ಸರ್ಕಾರದ ಈ ಹೊಸ ಹೆಜ್ಜೆಯು ಮುಂಬರುವ ದಿನಗಳಲ್ಲಿ ಆಡಳಿತ ಮತ್ತು ರಾಜಕೀಯ ವಲಯದಲ್ಲಿ ಯಾವ ರೀತಿಯ ಚರ್ಚೆಗಳಿಗೆ ಗ್ರಾಸವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Topics

ಸಂಬಂಧಿತ ಸುದ್ದಿಗಳು