News Next Kannada

karnataka

ಸಾಲು ಸಾಲು ಹಬ್ಬಗಳ ಮಾಸದಲ್ಲೇ ಗ್ರಾಹಕರಿಗೆ ಬಿಗ್​ಶಾಕ್​ : ಸಕ್ಕರೆ ಬೆನ್ನಲ್ಲೇ ತರಕಾರಿ, ಅಕ್ಕಿ ದರವೂ ಗಗನಕ್ಕೆ ಏರಿಕೆ!

ಪ್ರಸ್ತುತ ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ಆಹಾರ ಧಾನ್ಯಗಳು ಮತ್ತು ತರಕಾರಿಗಳ ಬೆಲೆ ಕಳೆದ ಐದು ವರ್ಷಗಳಲ್ಲೇ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿದೆ.

By ರಶ್ಮಿ ಎಸ್. | Rashmi S
karnataka vegetables sugar rice price hike festival season

ಆಷಾಢ ಮುಗಿದು ಸಾಲು ಸಾಲು ಹಬ್ಬಗಳ ಸರಣಿ ಹೊತ್ತು ತರುವ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಭಾರೀ ಶಾಕ್ ಎದುರಾಗಿದೆ. ರಾಜ್ಯಾದ್ಯಂತ ಎದುರಾಗಿರುವ ಮುಂಗಾರು ಮಳೆಯ ತೀವ್ರ ಕೊರತೆಯು ಕೃಷಿ ವಲಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಹಬ್ಬದ ಸಂಭ್ರಮದ ನಡುವೆಯೇ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಪ್ರಕೃತಿಯ ಮುನಿಸಿನಿಂದಾಗಿ ಭತ್ತ ಮತ್ತು ಕಬ್ಬಿನ ಒಟ್ಟಾರೆ ಇಳುವರಿ ಶೇಕಡಾ 50 ರಷ್ಟು ಕುಸಿದಿರುವುದೇ ಈ ಹಠಾತ್ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ಆಹಾರ ಧಾನ್ಯಗಳು ಮತ್ತು ತರಕಾರಿಗಳ ಬೆಲೆ ಕಳೆದ ಐದು ವರ್ಷಗಳಲ್ಲೇ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿದೆ. ಹಿಂದೆ ಪ್ರತಿ ಕೆಜಿಗೆ 50 ರೂಪಾಯಿ ಆಸುಪಾಸಿನಲ್ಲಿದ್ದ ಗುಣಮಟ್ಟದ ಅಕ್ಕಿಯ ದರ ಈಗ 70 ರೂಪಾಯಿಗೆ ಮುಟ್ಟಿದೆ. ಪ್ರಮುಖವಾಗಿ ಕರಾವಳಿ ಮತ್ತು ಗ್ರಾಮೀಣ ಭಾಗದ ನೆಚ್ಚಿನ ಕುಚಲಕ್ಕಿಯ 30 ಕೆಜಿ ಚೀಲದ ಬೆಲೆ ಕೇವಲ ಮೂರ್ನಾಲ್ಕು ತಿಂಗಳಲ್ಲಿ 1,500 ರೂ.ನಿಂದ 1,800 ರೂಪಾಯಿಗೆ ಏರಿಕೆಯಾಗಿದೆ. ಮತ್ತೊಂದೆಡೆ ಕಬ್ಬಿನ ಉತ್ಪಾದನೆ ಕುಂಠಿತಗೊಂಡ ಹಿನ್ನೆಲೆಯಲ್ಲಿ ಹಬ್ಬದ ಅಡುಗೆಗೆ ಬೇಕಾದ ಸಿಹಿಯ ದರವೂ ಕಹಿಯಾಗಿದೆ. ಕೆಜಿಗೆ 50 ರೂಪಾಯಿ ಇದ್ದ ಸಕ್ಕರೆ ಬೆಲೆ 68 ರೂಪಾಯಿಗೆ ತಲುಪಿದ್ದರೆ, ಉಂಡೆ ಬೆಲ್ಲದ ದರ 45 ರೂಪಾಯಿಯಿಂದ 75 ರೂಪಾಯಿಗೆ ಜಿಗಿದಿದೆ.

ಹಬ್ಬದ ವಿಶೇಷ ಅಡುಗೆಗೆ ಅತ್ಯಗತ್ಯವಾದ ತರಕಾರಿಗಳೂ ಗ್ರಾಹಕರನ್ನು ಕಂಗಾಲಾಗಿಸುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಬೀನ್ಸ್, ಈರುಳ್ಳಿ, ಕ್ಯಾರೆಟ್ ಹಾಗೂ ಬದನೆಕಾಯಿ ದರಗಳು ಕೆಜಿಗೆ 60 ರಿಂದ 70 ರೂಪಾಯಿ ಆಸುಪಾಸಿನಲ್ಲಿದ್ದರೆ, ಬೆಳ್ಳುಳ್ಳಿ ಬೆಲೆ ಪ್ರತಿ ಕೆಜಿಗೆ 250 ರೂಪಾಯಿಯ ಗಡಿ ದಾಟಿದೆ. ಈಗಾಗಲೇ ಇಂಧನ ಮತ್ತು ವಿದ್ಯುತ್ ದರ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ, ಈಗ ಅಗತ್ಯ ದಿನಸಿ ಪದಾರ್ಥಗಳ ಬೆಲೆ ನಾಗಾಲೋಟದಲ್ಲಿ ಸಾಗಿರುವುದು ನುಂಗಲಾರದ ತುತ್ತಾಗಿದೆ. ವ್ಯಾಪಾರಿಗಳ ಪ್ರಕಾರ, ಬಿತ್ತನೆ ಪ್ರಮಾಣ ಸುಧಾರಿಸದಿದ್ದರೆ ವರ್ಷಾಂತ್ಯದ ವೇಳೆಗೆ ಅಕ್ಕಿ ಮತ್ತಷ್ಟು ದುಬಾರಿಯಾಗುವ ಆತಂಕವಿದೆ.