ಕಿಚನ್​ ಬಜೆಟ್​ ಏರುಪೇರು : ತಲೆತಿರುಗಿಸುತ್ತೆ ಅಕ್ಕಿ ಬೆಲೆ!

ಹೊಸ ದರ ಪಟ್ಟಿಯ ಪ್ರಕಾರ, ಸಗಟು ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಅಕ್ಕಿಯ ಬೆಲೆಯಲ್ಲಿ ಬರೋಬ್ಬರಿ ಒಂದು ಸಾವಿರ ರೂಪಾಯಿಯಷ್ಟು ಭಾರಿ ಏರಿಕೆ ಕಂಡಿದೆ.

By ರಶ್ಮಿ ಎಸ್. | Rashmi S

1 min read

WhatsAppPost
rice price surge karnataka kitchen budget
rice price surge karnataka kitchen budget

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದರ ನೇರ ಪರಿಣಾಮ ಈಗ ಗ್ರಾಹಕರ ಅಡುಗೆ ಮನೆಯ ಬಜೆಟ್ ಮೇಲೆ ಬಿದ್ದಿದೆ. ಜಲಾಶಯಗಳಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಭತ್ತದ ಇಳುವರಿ ಗಣನೀಯವಾಗಿ ಕುಸಿದಿದ್ದು, ಮಾರುಕಟ್ಟೆಗೆ ಅಕ್ಕಿ ಪೂರೈಕೆ ಕಡಿಮೆಯಾಗಿದೆ. ಪರಿಣಾಮವಾಗಿ ರಾಜ್ಯಾದ್ಯಂತ ಅಕ್ಕಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇಂದಿನಿಂದ ಹೊಸ ದರ ಜಾರಿಗೆ ಬಂದಿದೆ.

ಹೊಸ ದರ ಪಟ್ಟಿಯ ಪ್ರಕಾರ, ಸಗಟು ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಅಕ್ಕಿಯ ಬೆಲೆಯಲ್ಲಿ ಬರೋಬ್ಬರಿ ಒಂದು ಸಾವಿರ ರೂಪಾಯಿಯಷ್ಟು ಭಾರಿ ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಮಾನ್ಯ ದರ್ಜೆಯ ಅಕ್ಕಿಗೆ ಪ್ರತಿ ಕೆಜಿಗೆ 5 ರಿಂದ 10 ರೂಪಾಯಿ ಹೆಚ್ಚಾಗಿದ್ದರೆ, ಉತ್ತಮ ಗುಣಮಟ್ಟದ ಅಕ್ಕಿಯ ಬೆಲೆ ಕೆಜಿಗೆ 10 ರಿಂದ 20 ರೂಪಾಯಿಯಷ್ಟು ದುಬಾರಿಯಾಗಿದೆ. ಇದರಿಂದಾಗಿ ಒಂದು ಸಾಮಾನ್ಯ ಅಕ್ಕಿ ಚೀಲದ ಮೇಲೆ ₹200 ಹಾಗೂ ಬ್ರಾಂಡೆಡ್ ಅಥವಾ ಕ್ವಾಲಿಟಿ ಅಕ್ಕಿ ಚೀಲದ ಮೇಲೆ ₹250 ರಿಂದ ₹300 ರವರೆಗೆ ಬೆಲೆ ಏರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ದರ ಮತ್ತಷ್ಟು ಹೆಚ್ಚಾಗಬಹುದು ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆ ಕೊರತೆಯ ಜೊತೆಗೆ ಭತ್ತ ಸಂಸ್ಕರಣೆಗೆ ಬೇಕಾದ ಕಚ್ಚಾ ವಸ್ತುಗಳ ಅಭಾವ ಉಂಟಾಗಿರುವುದು ದರ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಇದಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಕೊರತೆ ಇದ್ದರೂ ಭಾರತದಿಂದ ವಿದೇಶಗಳಿಗೆ ಭಾರಿ ಪ್ರಮಾಣದಲ್ಲಿ ಅಕ್ಕಿ ರಫ್ತಾಗುತ್ತಿರುವುದು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅಕ್ಕಿ ಕೊರತೆಗೆ ದಾರಿ ಮಾಡಿಕೊಟ್ಟಿದೆ. ಬರಗಾಲ ಮತ್ತು ಹೆಚ್ಚುತ್ತಿರುವ ಬೆಲೆಗಳ ಮಧ್ಯೆ ಸಾಮಾನ್ಯ ಜನರು ದೈನಂದಿನ ಜೀವನ ನಡೆಸುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Topics

ಸಂಬಂಧಿತ ಸುದ್ದಿಗಳು