Kannada News Next

mangaluru

ಕರಾವಳಿಯಲ್ಲಿ ಇಡೀ ವಾರ ಬಿಟ್ಟೂ ಬಿಡದೆ ಸುರಿಯಲಿದೆ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಕರ್ನಾಟಕದ ವಾತಾವರಣದಲ್ಲಿ ಭಾರಿ ಏರುಪೇರು ಕಂಡುಬರುತ್ತಿದ್ದು, ಅಕ್ಟೋಬರ್ 4 ರಿಂದ ಇಡೀ ರಾಜ್ಯಾದ್ಯಂತ ಮಳೆಯ ಚಟುವಟಿಕೆಗಳು ಗಣನೀಯವಾಗಿ ತೀವ್ರಗೊಳ್ಳಲಿವೆ

By ರಶ್ಮಿ ಎಸ್. | Rashmi S
Karnataka coastal rain forecast weather department-alert

ಬೆಂಗಳೂರು : ಕರ್ನಾಟಕದ ವಾತಾವರಣದಲ್ಲಿ ಭಾರಿ ಏರುಪೇರು ಕಂಡುಬರುತ್ತಿದ್ದು, ಅಕ್ಟೋಬರ್ 4 ರಿಂದ ಇಡೀ ರಾಜ್ಯಾದ್ಯಂತ ಮಳೆಯ ಚಟುವಟಿಕೆಗಳು ಗಣನೀಯವಾಗಿ ತೀವ್ರಗೊಳ್ಳಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಬಂಗಾಳಕೊಲ್ಲಿಯ ಕಡೆಯಿಂದ ತಮಿಳುನಾಡು ಮಾರ್ಗವಾಗಿ ಬೀಸುತ್ತಿರುವ ತೇವಾಂಶಭರಿತ ಬಲವಾದ ಗಾಳಿಯ ಪರಿಣಾಮದಿಂದಾಗಿ, ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಸುರಿಯುವ ಮಳೆಯ ಆರ್ಭಟ ಹೆಚ್ಚಾಗಲಿದೆ.

ವಿಶೇಷವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ ಮತ್ತು ರಾಮನಗರಗಳಲ್ಲಿ ಇಂದಿನಿಂದಲೇ ವರುಣನ ಪ್ರಭಾವ ಜೋರಾಗಿರಲಿದೆ.

ಇದರ ಬೆನ್ನಲ್ಲೇ ಅಕ್ಟೋಬರ್ 5 ಮತ್ತು 6 ರಂದು ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದ ಸಕಲೇಶಪುರ ಭಾಗಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಇನ್ನೊಂದೆಡೆ ಕರಾವಳಿ ತೀರದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಇಡೀ ವಾರ ಅಂದರೆ ಅಕ್ಟೋಬರ್ 9 ರವರೆಗೆ ಬಿಸಿಲು ಮತ್ತು ಮೋಡದ ವಾತಾವರಣದ ನಡುವೆಯೇ ಸಂಜೆಯ ವೇಳೆಗೆ ಸಾಧಾರಣದಿಂದ ಉತ್ತಮ ಮಳೆಯಾಗುವ ಸರಣಿ ಮುಂದುವರಿಯಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ನಾಳೆಯಿಂದ ಮಳೆ ಚುರುಕಾಗಲಿದೆ.

ಆದರೆ ಉತ್ತರ ಒಳನಾಡಿನ ಪರಿಸ್ಥತಿ ಇದಕ್ಕೆ ಸಂಪೂರ್ಣ ಭಿನ್ನವಾಗಿದೆ. ಉತ್ತರ ಭಾರತದಿಂದ ಬೀಸುತ್ತಿರುವ ಒಣ ಹವೆಯ ಕಾರಣದಿಂದಾಗಿ ಬಾಗಲಕೋಟೆ, ಗದಗ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಯಾವುದೇ ದೊಡ್ಡ ಮಳೆಯ ಲಕ್ಷಣಗಳಿಲ್ಲದೆ ಒಣ ವಾತಾವರಣವೇ ಮುಂದುವರಿಯಲಿದೆ.

ಕೇವಲ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಾತ್ರ ಹಗುರವಾದ ತುಂತುರು ಮಳೆ ನಿರೀಕ್ಷಿಸಬಹುದಾಗಿದೆ. ಅಕ್ಟೋಬರ್ 7 ರ ನಂತರ ಒಟ್ಟಾರೆ ಮಳಯ ತೀವ್ರತೆ ತಗ್ಗುವ ಮುನ್ಸೂಚನೆ ಇದೆ.