Kannada News Next

udupi

ಅಮಾಸೆಬೈಲು : ಸಾಲ, ಸ್ನೇಹಿತರ ಪಾರ್ಟಿ ಗಲಾಟೆ : ದೂರಿಗೆ ಪ್ರತಿದೂರು

ಮನೆಯ ಬಳಿಯಲ್ಲಿ ಮದ್ಯಪಾನ ಪಾರ್ಟಿ ಪ್ರಶ್ನಿಸಿದ ತಾಯಿಯ ಮೇಲೆ ಹಲ್ಲೆ ಹಾಗೂ ಹಳೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಪರಸ್ಪರ ಹಲ್ಲೆ ನಡೆದಿದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
Photo: Google Gemini

ಉಡುಪಿ: ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದೆ. ಮನೆಯ ಬಳಿಯಲ್ಲಿ ಮದ್ಯಪಾನ ಪಾರ್ಟಿ ಪ್ರಶ್ನಿಸಿದ ತಾಯಿಯ ಮೇಲೆ ಹಲ್ಲೆ ಹಾಗೂ ಹಳೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಪರಸ್ಪರ ಹಲ್ಲೆ ನಡೆದಿದೆ. ಈ ಕುರಿತು ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಸಾಲ ಮರುಪಾವತಿ ಮಾಡದ್ದಕ್ಕೆ ಹಲ್ಲೆ

ಅವಿಚರಣ್‌ ನಾಯ್ಕ್‌ ಅವರು ನೀಡಿದ ದೂರಿನಲ್ಲಿ, ರಾಘವೇಂದ್ರ ನಾಯ್ಕ್‌ ಎಂಬವರು ತನಗೆ ಕರೆ ಮಾಡಿ, ತಮ್ಮ ಶರತ್‌ ನಾಯ್ಕ್‌ ಬೈಕ್‌ ಸ್ಕಿಡ್‌ ಆಗಿ ಬಿದ್ದು ಆಸ್ಪತ್ರೆಗೆ ದಾಖಲಿಸುವುದಕ್ಕೆ ಬರುವಂತೆ ತಿಳಿಸಿದ್ದಾರೆ. ಕೂಡಲೇ ಅವಿಚರಣ್‌ ತನ್ನ ಸ್ನೇಹಿತ ನಾಗರಾಜನ ಜೊತೆಗೆ ಮಾಯಾ ಬಜಾರ್‌ ಜಂಕ್ಷನ್‌ ಬಳಿಗೆ ತೆರಳಿದ್ದಾರೆ. ಆದರೆ ಅಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ರಾಘವೇಂದ್ರ ನಾಯ್ಕ್‌ ಅವರಿಗೆ ಕರೆ ಮಾಡಿದಾಗ ಮತ್ತೊಂದು ಸ್ಥಳಕ್ಕೆ ಬರುವಂತೆ ತಿಳಿಸಿದ್ದು, ನಂತರ ಮನೆಗೆ ಶರತ್‌ ನಾಯ್ಕ್‌ ಅವರ ಮನೆಗೆ ತರಳಿದ್ದಾರೆ.

ರಾತ್ರಿ ಸುಮಾರು 09:45ಕ್ಕೆ ಹೋದ ವೇಳೆಯಲಿ ಸತೀಶ್ ಶೆಟ್ಟಿ ಅಲಿಯಾಸ್ ತಮ್ಮಯ್ಯ ಶೆಟ್ಟಿ, ರಾಘವೇಂದ್ರ ನಾಯ್ಕ, ಬೆಳ್ಳ ನಾಯ್ಕ, ರಾಘವೇಂದ್ರ ಪೂಜಾರಿ, ಶ್ರೀಧರ ನಾಯ್ಕ ಹಾಗೂ ಶರಣ್ ನಾಯ್ಕ ಸೇರಿಕೊಂಡು ಮರದ ದೊಣ್ಣೆಯಿಂದ ಎಡಕಾಲು, ಬಲಕಾಲು, ಬೆನ್ನು ಮತ್ತು ಬಲಕೈಗೆ ಹೊಡೆದು ಹಲ್ಲೆ ನಡೆಸಿದ್ದಾರೆ.

ಅಲ್ಲದೇ ಅಲ್ಲಿಯೇ ಇದ್ದ ಶ್ರೀಧರ ನಾಯ್ಕ್‌, ರಾಘವೇಂದ್ರ ಪೂಜಾರಿ ಮತ್ತು ಶರಣ್ ನಾಯ್ಕ ಸೇರಿ ಕೇಬಲ್ ವಯರ್‌ನಿಂದ ಹಲ್ಲೆ ನಡೆಸಿದ್ದಾರೆ. ತನ್ನ ಸ್ನೇಹಿತ ನಾಗರಾಜ್‌ ಹಲ್ಲೆಯನ್ನು ತಡೆಯಲು ಬಂದಿದ್ದು, ಆತನಿಗೂ ಆರೋಪಿಗಳು ಬೆದರಿಕೆ ಹಾಕಿದ್ದು, ಮೊಬೈಲ್‌ ಪೋನ್‌ ಜಖಂಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅವಿಚರಣ್‌ ನಾಯ್ಕ್‌ ಅವರ ಪತ್ನಿ ಅಕ್ಷತಾ ಅವರು ವೈಯಕ್ತಿಕ ಸಾಲ ಪಡೆಯುವ ವೇಳೆಯಲ್ಲಿ ರಾಘವೇಂದ್ರ ನಾಯ್ಕ್‌ ಅವರ ಅಜ್ಜಿ ಜಾಮೀನು ಹಾಖಿದ್ದರು. ಆದರೆ ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಅಮಾಸೆಬೈಲು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಮನೆ ಬಳಿ ಮದ್ಯಪಾನ ಪಾರ್ಟಿ : ತಾಯಿಗೆ ಮಗನಿಂದ ಹಲ್ಲೆ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶರತ್‌ ಎಂಬವರ ತಾಯಿ ಸರಸ್ವತಿ ಅವರು ಕೂಡ ದೂರು ನೀಡಿದ್ದಾರೆ. ರಾತ್ರಿ 09:45 ರ ಸುಮಾರಿಗೆ ಮಗನಾಗಿರುವ ಶರತ್‌‌ ನಾಯ್ಕ್‌ ತನ್ನ ಸ್ನೇಹಿತ ಅವಿಚರಣ್ ಮತ್ತು ನಾಗರಾಜ ಎಂಬವರನ್ನು ಕರೆತಂದು ಮನೆಯ ಪಕ್ಕದ ಶೆಡ್‌ನಲ್ಲಿ ಮದ್ಯಪಾನ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಲು ಹೋದ ನನ್ನ ಮುಖಕ್ಕೆ ಮಗ ಶರತ್‌ ಪೈಪ್‌ನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.

ಗಲಾಟೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಅಳಿಯ ರಾಘವೇಂದ್ರ ಹಾಗೂ ಅಳಿಯನ ಸ್ನೇಹಿತ ಸತೀಶ್‌ ಶೆಟ್ಟಿ ಅವರಿಗೂ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವಿಚರಣ್‌ ಸತೀಶ್‌ ಶೆಟ್ಟಿ ಅವರ ಕೈಗೆ ರೀಪಿನ ತುಂಡಿನಿಂದ ಹೊಡೆದು ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು, ಪ್ರತಿದೂರುಗಳನ್ನು ದಾಖಲಿಸಿಕೊಂಡಿರುವ ಅಮಾಸೆಬೈಲು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರ ಬರೋದಕ್ಕೆ ಸಾಧ್ಯ.