ಮಣಿಪಾಲ: ಕಂಪನಿಗೆ 12 ಲಕ್ಷ ರೂಪಾಯಿ ವಂಚನೆ, 6 ಮಂದಿ ವಿರುದ್ದ ಪ್ರಕರಣ ದಾಖಲು
ಎಂಐಟಿ ಕ್ಯಾಂಪಸ್‌ನಲ್ಲಿರುವ Indeanta E-Mobility Pvt. Ltd ಕಂಪನಿಯ ದಿವ್ಯಾ ಯತೀನ್ ಶೆಟ್ಟಿ ಅವರು ಮಣಿಪಾಲ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಉಡುಪಿ: ಖಾಸಗಿ ಕಂಪೆನಿಯೊಂದರ ಅಧಿಕೃತ ಕ್ಯೂಆರ್ (QR) ಕೋಡ್ ಬದಲಿಗೆ ವೈಯಕ್ತಿಕ ಮರ್ಚೆಂಟ್ QR ಕೋಡ್ ಬಳಸಿ ಸುಮಾರು 12 ಲಕ್ಷ ರೂಪಾಯಿ ವಂಚನೆ ನಡೆಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಈ ಕುರಿತು ಆರು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿರುವ Indeanta E-Mobility Pvt. Ltd ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ದಿವ್ಯಾ ಯತೀನ್ ಶೆಟ್ಟಿ ಅವರು ನೀಡಿದ ದೂರಿನ ಆಧಾರದ ಮೇಲೆ ಮಣಿಪಾಲ ಠಾಣೆಯ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿದ್ದಮೂರ್ತಿ, ಶಿವರಾಜ್ ನಾಯಕ್, ಸುದೀಪ್, ಜಿತೇಶ್ ಎಲ್ ಕಾಂಚನ್, ಎಮ್ ಬಿ ಅವಿನಾಶ್ ಮತ್ತು ಮುತ್ತಣ್ಣ ಅದಿನವರ್ ಎಂಬವರ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ. ಆರೋಪಿಗಳು 2026ರ ಎಪ್ರಿಲ್1ರಿಂದಲೂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಕಂಪೆನಿಗೆ ಪ್ರಯಾಣಿಕರಿಂದ ಬರಬೇಕಾಗಿದ್ದ ಹಣವನ್ನು ಕಂಪೆನಿಯ ಕ್ಯೂರ್‌ಕೋಡ್ ಬದಲು ತಮ್ಮ ವೈಯಕ್ತಿಕ ಕ್ಯೂರ್ ಕೋಡ ಬಳಸಿ ಸಂಗ್ರಹ ಮಾಡಿದ್ದಾರೆ. ಹೀಗೆ ಸಂಗ್ರಹ ಆಗಿರುವ ಒಟ್ಟು 12 ಲಕ್ಷ ರೂಪಾಯಿ ಹಣವನ್ನು ಆರೋಪಿ ಮುತ್ತಣ್ಣ ಆದಿನವರ್ ಪತ್ನಿ ಐಶ್ವರ್ಯ ಮುತ್ತಣ್ಣ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಹಣವನ್ನು ಎಲ್ಲರೂ ಹಂಚಿಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ಯೂ ಆರ್ ಕೋಡ ದುರುಪಯೋಗ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
Topics

