udupiಪ್ರಮುಖ ಸುದ್ದಿಗಳು

ಶಿವಪುರ ಶಾಲೆಯ ಪುಟ್ಟ ಕನಸುಗಳಿಗೆ ಬೇಕಿದೆ ದೊಡ್ಡ ಆಸರೆ

ಶಿವಪುರ ಶಾಲೆಯ ಶಿಕ್ಷಕರಿಗೆ ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸುವ ಉದ್ದೇಶವಿಲ್ಲ. ಆದರೆ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಮಕ್ಕಳ ಕಲಿಕೆಗೆ ಅಗತ್ಯವಾದ ಸೌಲಭ್ಯಗಳು ಸರಕಾರಿ ಶಾಲೆಗಳಲ್ಲೂ ಇರಬೇಕು

By ಅಶ್ವಥ್ ಆಚಾರ್ಯ | Ashwath Acharya

2 min read

WhatsAppPost
Hebri Shivapura Primary School Problem
Hebri Shivapura Primary School Problem

ಉಡುಪಿ : ಸುತ್ತಲೂ ಹಸಿರು ಹೊದ್ದ ಬೆಟ್ಟ-ಗುಡ್ಡಗಳು... ಕಣ್ಮನ ಸೆಳೆಯುವ ಪ್ರಕೃತಿಯ ಸೊಬಗು... ಬೆಳಗ್ಗಿನಿಂದಲೇ ಕೇಳಿಸುವ ಮಕ್ಕಳ ಕಲರವ... ಅದರ ನಡುವೆ ಅಚ್ಚುಕಟ್ಟಾಗಿ ನಿಂತಿರುವ ಶಾಲಾ ಕಟ್ಟಡ. ನೋಡಲು ಎಷ್ಟು ಸುಂದರವೋ, ಅಲ್ಲಿನ ಮಕ್ಕಳ ಶಿಸ್ತು, ಕಲಿಕೆಯ ಉತ್ಸಾಹವೂ ಅಷ್ಟೇ ಮನಮೋಹಕ. ಇದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.

ಪಶ್ಚಿಮ ಘಟ್ಟದ ತಪ್ಪಲಿನ ಪ್ರಕೃತಿ ಸೌಂದರ್ಯದ ನಡುವೆ ಇರುವ ಈ ಶಾಲೆ, ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ದೀಪವನ್ನು ಆರದಂತೆ ಕಾಪಾಡಿಕೊಂಡು ಬರುತ್ತಿದೆ. ಖಾಸಗಿ ಶಾಲೆಗಳ ಆಕರ್ಷಣೆ, ಇಂಗ್ಲಿಷ್ ಮಾಧ್ಯಮದ ಮೋಹದ ನಡುವೆಯೂ ಬರೋಬ್ಬರಿ 290 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಈ ಸರಕಾರಿ ಶಾಲೆಯ ಅಂಗಳದಲ್ಲಿ ತಮ್ಮ ಭವಿಷ್ಯದ ಕನಸುಗಳಿಗೆ ಅಕ್ಷರದ ಬಣ್ಣ ತುಂಬುತ್ತಿದ್ದಾರೆ.

ಶಾಲೆಯ ಆವರಣಕ್ಕೆ ಕಾಲಿಟ್ಟರೆ ಎಲ್ಲೆಡೆ ಮಕ್ಕಳ ಓಡಾಟ, ನಗು, ಆಟ, ಪಾಠದ ಸದ್ದು. ಆದರೆ ಈ ಕಲರವದ ನಡುವೆಯೂ ಮಕ್ಕಳಲ್ಲಿ ಕಾಣಿಸುವ ಶಿಸ್ತು ಗಮನ ಸೆಳೆಯುತ್ತದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜತೆಗೆ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸರಕಾರಿ ಶಾಲೆ ಎಂದರೆ ಸೌಲಭ್ಯಗಳ ಕೊರತೆ ಎಂಬ ಸಾಮಾನ್ಯ ಕಲ್ಪನೆಗೆ ಶಿವಪುರ ಶಾಲೆ ತನ್ನದೇ ರೀತಿಯಲ್ಲಿ ಉತ್ತರ ನೀಡುತ್ತಿದೆ.

ಮಕ್ಕಳ ಕಲಿಕೆಯ ಆಸಕ್ತಿ, ಶಿಕ್ಷಕರ ಪರಿಶ್ರಮ ಹಾಗೂ ಸ್ಥಳೀಯರ ಸಹಕಾರದಿಂದ ಶಾಲೆ ತನ್ನದೇ ಆದ ಛಾಪು ಮೂಡಿಸಿದೆ. ತಾವು ಕಲಿತ ಶಾಲೆಯ ಮೇಲಿನ ಋಣ ತೀರಿಸಬೇಕು ಎಂಬ ಮನೋಭಾವ ಹಳೆ ವಿದ್ಯಾರ್ಥಿಗಳಲ್ಲಿದೆ. ಶಾಲಾ ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಶಾಲೆಯ ಅಂದ-ಚಂದವನ್ನು ಹೆಚ್ಚಿಸುವ ಹಲವು ಕೆಲಸಗಳು ನಡೆಯುತ್ತಿವೆ.

ತಮ್ಮ ಬಾಲ್ಯದ ಹೆಜ್ಜೆ ಗುರುತುಗಳನ್ನು ಹೊತ್ತಿರುವ ಶಾಲೆಯ ಅಂಗಳವನ್ನು ಮತ್ತೆ ಸುಂದರಗೊಳಿಸುವ ಹಂಬಲದಿಂದ ಹಳೆ ವಿದ್ಯಾರ್ಥಿಗಳು ಕೈಜೋಡಿಸುತ್ತಿದ್ದಾರೆ. ದಾನಿಗಳ ನೆರವಿನಿಂದ ಶಾಲೆಯನ್ನು ಹಂತ ಹಂತವಾಗಿ ಒಪ್ಪ-ಒರಣಗೊಳಿಸುವ ಕಾರ್ಯವೂ ಸಾಗುತ್ತಿದೆ. ಶಾಲೆಗೆ ದೂರದ ಪ್ರದೇಶಗಳಿಂದ ಆಗಮಿಸುವ ಮಕ್ಕಳ ಅನುಕೂಲಕ್ಕಾಗಿ ಒಂದು ವ್ಯಾನ್ ಹಾಗೂ ಒಂದು ಬಸ್ ಸೇವೆಯೂ ಲಭ್ಯವಿದೆ.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಾಲಾ ಶಿಕ್ಷಣದ ಬಾಗಿಲು ಇನ್ನಷ್ಟು ಸುಲಭವಾಗಿ ತೆರೆದುಕೊಳ್ಳುವಂತೆ ಈ ವ್ಯವಸ್ಥೆ ನೆರವಾಗುತ್ತಿದೆ. ಆದರೆ ಮಕ್ಕಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶಾಲೆಯ ಅಗತ್ಯತೆಗಳ ಪಟ್ಟಿಯೂ ದೊಡ್ಡದಾಗಿದೆ.

ಶಾಲೆಯ ಅಂಗಳದಲ್ಲಿ ಮಕ್ಕಳ ಮುಖದಲ್ಲಿ ನಗು ಇದ್ದರೂ, ಶಾಲೆಯ ಮೂಲಸೌಕರ್ಯಗಳ ಸ್ಥಿತಿಯಲ್ಲಿ ಇನ್ನೂ ಹಲವು ಪ್ರಶ್ನೆಗಳು ಉಳಿದಿವೆ. ಅದರಲ್ಲೂ ಪ್ರಮುಖವಾದದ್ದು ಸುಸಜ್ಜಿತ ಅಡುಗೆ ಕೋಣೆ ಮತ್ತು ಭೋಜನಾಲಯದ ಕೊರತೆ. ಬಿಸಿಲಿನ ದಿನಗಳಲ್ಲಿ ಹೇಗೋ ಊಟದ ವ್ಯವಸ್ಥೆ ಮಾಡಬಹುದು. ಆದರೆ ಮಳೆಗಾಲ ಆರಂಭವಾದರೆ ಮಕ್ಕಳ ಸಂಕಷ್ಟ ಹೆಚ್ಚುತ್ತದೆ.

ಆಕಾಶ ಕಪ್ಪಾಗಿಸಿ ಮಳೆ ಸುರಿಯಲಾರಂಭಿಸಿದರೆ, ಮಕ್ಕಳಿಗೆ ಊಟ ಮಾಡಲು ಸೂಕ್ತ ಸ್ಥಳವಿಲ್ಲದೆ ಶಾಲೆಯ ಜಗಲಿಯೇ ಭೋಜನಾಲಯವಾಗುತ್ತಿದೆ. 290 ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುವ ಶಾಲೆಯಲ್ಲಿ ಮಕ್ಕಳಿಗೆ ಗೌರವಯುತ, ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣದಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಲು ಪ್ರತ್ಯೇಕ ಭೋಜನಾಲಯದ ಅಗತ್ಯವಿದೆ. ಮಕ್ಕಳ ಹೊಟ್ಟೆ ತುಂಬಿಸುವ ಬಿಸಿಯೂಟಕ್ಕೆ ಸೌಲಭ್ಯಗಳ ಕೊರತೆ ಅಡ್ಡಿಯಾಗಬಾರದು ಎಂಬುದು ಇಲ್ಲಿನ ಶಿಕ್ಷಕರು ಹಾಗೂ ಪೋಷಕರ ಆಶಯ.

ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳೊಳಗಿನ ಪಾಠವಲ್ಲ. ಮಕ್ಕಳ ಓಟ, ಆಟ, ಗೆಲುವಿನ ಸಂಭ್ರಮ, ಸೋಲಿನಿಂದ ಕಲಿಯುವ ಪಾಠವೂ ಶಿಕ್ಷಣದ ಒಂದು ಭಾಗವೇ. ಆದರೆ ಮಕ್ಕಳ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ಉತ್ತಮ ಆಟದ ಮೈದಾನದ ಅಗತ್ಯವಿದೆ.

ವಿಶಾಲ ಹಾಗೂ ಸುರಕ್ಷಿತ ಮೈದಾನ ದೊರೆತರೆ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಇದರ ಜತೆಗೆ ಶಾಲೆಯ ಸುತ್ತಲೂ ಆವರಣ ಗೋಡೆ ನಿರ್ಮಾಣ ಕೂಡ ಅಗತ್ಯವಾಗಿದೆ. ಮಕ್ಕಳ ಸುರಕ್ಷತೆ ಹಾಗೂ ಶಾಲಾ ಆವರಣದ ರಕ್ಷಣೆಯ ದೃಷ್ಟಿಯಿಂದ ಇದು ಪ್ರಮುಖ ಬೇಡಿಕೆಯಾಗಿದೆ.

ಶಿವಪುರ ಶಾಲೆಯ ಶಿಕ್ಷಕರಿಗೆ ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸುವ ಉದ್ದೇಶವಿಲ್ಲ. ಆದರೆ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಮಕ್ಕಳ ಕಲಿಕೆಗೆ ಅಗತ್ಯವಾದ ಸೌಲಭ್ಯಗಳು ಸರಕಾರಿ ಶಾಲೆಗಳಲ್ಲೂ ಇರಬೇಕು ಎಂಬುದು ಅವರ ಸರಳವಾದ ಕನಸು. ಶಾಲೆಯ ಬಹುತೇಕ ಕಟ್ಟಡಗಳು ಇದೀಗ ಶಿಥಿಲಾವಸ್ಥೆಯತ್ತ ಸಾಗುತ್ತಿವೆ.

ಹೀಗಾಗಿ ಕಟ್ಟಡಗಳ ದುರಸ್ತಿ, ನವೀಕರಣ ಹಾಗೂ ಅಗತ್ಯವಿರುವ ಕಡೆಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಮಕ್ಕಳಿಗೆ ಸುರಕ್ಷಿತ ಹಾಗೂ ಆಹ್ಲಾದಕರ ಕಲಿಕಾ ವಾತಾವರಣ ಕಲ್ಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎನ್ನುತ್ತಾರೆ ಹಳೆ ವಿದ್ಯಾರ್ಥಿ ಸಂಘದ ರಾಘವೇಂದ್ರ ಪೂಜಾರಿ

ಒಟ್ಟಾರೆಯಾಗಿ ಕನ್ನಡ ಉಳಿಸಿ ಕನ್ನಡ ಬೆಳೆಸಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಎಂದು ಘೋಷಣೆಗಳು ಮೊಳಗುತ್ತಲೇ ಇವೆ. ಆದರೆ ಕನ್ನಡದ ಕಂಪನ್ನು ಹೊತ್ತು ನಿಂತಿರುವ ಗ್ರಾಮೀಣ ಭಾಗದ ಶಾಲೆಗಳತ್ತಲೂ ಅದೇ ಕಾಳಜಿಯ ದೃಷ್ಟಿ ಹರಿಯಬೇಕಿದೆ.

ಶಿವಪುರದ ಈ ಶಾಲೆಗೆ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಮ್ಮೆ ಭೇಟಿ ನೀಡಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಕಣ್ಣಾರೆ ನೋಡಬೇಕಿದೆ. ಕನ್ನಡ ಉಳಿಸುವ ಮಾತುಗಳು ಕೇವಲ ಘೋಷಣೆಯಾಗದೆ, ಶಿವಪುರದಂತಹ ಶಾಲೆಗಳ ಅಭಿವೃದ್ಧಿಯ ಮೂಲಕ ಕಾರ್ಯರೂಪಕ್ಕೆ ಬರಲಿ ಎಂಬುದು ಸ್ಥಳೀಯರ ಆಶಯ.

Topics

ಸಂಬಂಧಿತ ಸುದ್ದಿಗಳು