ಅಮಾಸೆಬೈಲು: ಕಾರು ಮಾರಾಟದ ಹೆಸರಲ್ಲಿ ಮಾಲೀಕನಿಗೆ ವಂಚನೆ
ಶೇಡಿಮನೆ ಗ್ರಾಮದ ರಾಜೀವ ಶೆಟ್ಟಿ ಎಂಬವರು KA-20-MA-3371 ನೋಂದಣಿ ಸಂಖ್ಯೆಯ ಹ್ಯುಂಡೈ i20 ಕಾರನ್ನು ಮಾರಾಟ ಮಾಡಲು ಯೋಚಿಸಿದ್ದರು. ಇದಕ್ಕಾಗಿ ಗಿರಾಕಿಗಳನ್ನೂ ಹುಡುಕುತ್ತಿದ್ದರು.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಕುಂದಾಪುರ : ಕಾರು ಮಾರಾಟದ ಹೆಸರಲ್ಲಿ ಮಾಲೀಕನಿಗೆ ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
ಶೇಡಿಮನೆ ಗ್ರಾಮದ ರಾಜೀವ ಶೆಟ್ಟಿ ಎಂಬವರು KA-20-MA-3371 ನೋಂದಣಿ ಸಂಖ್ಯೆಯ ಹ್ಯುಂಡೈ i20 ಕಾರನ್ನು ಮಾರಾಟ ಮಾಡಲು ಯೋಚಿಸಿದ್ದರು. ಇದಕ್ಕಾಗಿ ಗಿರಾಕಿಗಳನ್ನೂ ಹುಡುಕುತ್ತಿದ್ದರು. ಇದೇ ಸಂದರ್ಭದಲ್ಲಿ ನೆರೆಕೆರೆಯ ಅವಿಚರಣ್ ನಾಯ್ಕ್ ಎಂಬಾತ, ತಾನು ಬ್ರೋಕರ್ ಕೆಲಸ ಮಾಡುತ್ತಿದ್ದು, ವಾಹನದ ಪರೀಕ್ಷೆ, ಶೋರೂಂನಲ್ಲಿ ತೋರಿಸಿ ಅಗತ್ಯ ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದಾನೆ.
ಇದನ್ನು ನಂಬಿದ ರಾಜೀವ ಶೆಟ್ಟಿ ಅವರು ಶೇಡಿಮನೆ ಗ್ರಾಮದ ಅಗಳಿಬೈಲಿನಲ್ಲಿ ಇರುವ ತಮ್ಮ ಮನೆಯಿಂದ 2025ರ ಫೆಬ್ರವರಿ 26ರಂದು ಕಾರನ್ನು ಅವಿಚರಣ್ ನಾಯ್ಕ್ ಚಲಾಯಿಸಿಕೊಂಡು ಹೋಗಿದ್ದಾನೆ. ಆದರೆ ಮೌಲ್ಯಮಾಪನದ ಬಳಿಕ ಕಾರು ಮನೆಗೆ ವಾಪಾಸ್ ಬಾರದ ಹಿನ್ನೆಲೆಯಲ್ಲಿ ವಿಚಾರಿಸಿದ್ದಾರೆ. ಕುಂದಾಪುರದ ಶೋರೂಂನಲ್ಲಿ ಕಾರು ಇದ್ದು, ಸ್ವಲ್ಪ ರಿಪೇರಿ ಮಾಡಬೇಕಾಗಿದೆ ಎಂದು ನಂಬಿಸಿದ್ದಾನೆ.
ಸ್ವಲ್ಪ ಸಮಯದ ನಂತರ ಕಾರು ರಿಪೇರಿ ಆಗಿದೆ ತಂದು ಕೊಡ್ತೇನೆ. ಇಲ್ಲ ಮಾರಾಟ ಮಾಡಿ ಹಣ ನೀಡುತ್ತೇನೆ ಎಂದು ಭರವಸೆ ನೀಡಿದ್ದಾನೆ. ಆದರೆ ಕಾರು ಹಾಗೂ ಹಣ ಸಿಗದೇ ಇದ್ದಾಗ ರಾಜೀವ ಶೆಟ್ಟಿ ಅವರು ಪರಿಶೀಲಿಸಿದಾಗ ಕಾರನ್ನು ಜಯಂತ ಪುತ್ರನ್ ಎಂಬವರಿಗೆ ಮಾರಾಟ ಮಾಡಿದ್ದಾಗಿ ತಿಳಿದು ಬಂದಿದೆ.
ಈ ಕುರಿತು ರಾಜೀವ ಶೆಟ್ಟಿ ಅವರು ಇದೀಗ ಆರೋಪಿಗಳಾದ ಅವಿಚರಣ್ ನಾಯ್ಕ್ ಮತ್ತು ಜಯಂತ ಪುತ್ರನ್ ವಿರುದ್ದ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ದೂರಿನಲ್ಲಿ ಕಾರಿನ ಸಾಲದ ಕಂತುಗಳನ್ನೂ ಮರುಪಾವತಿಸದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Topics

