Kannada News Next

udupi

ಕೃಷ್ಣನೂರಿನಲ್ಲಿ ಸಿಎಂ ಡಿ.ಕೆ ಶಿವಕುಮಾರ್​ ಧಾರ್ಮಿಕ ಪ್ರವಾಸ : ಉಚ್ಚಿಲ ಮಹಾಲಕ್ಷ್ಮಿ ಸನ್ನಿಧಿಗೆ ಭೇಟಿ

ನವರಾತ್ರಿ ಹಬ್ಬದ ವಿಶೇಷ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಚ್ಚಿಲಕ್ಕೆ ಭೇಟಿ ನೀಡುತ್ತಿದ್ದಾರೆ.

By ರಶ್ಮಿ ಎಸ್. | Rashmi S
cm dk shivakumar visits ucchila Mahalakshmi temple udupi

ಉಡುಪಿ: ನವರಾತ್ರಿ ಹಬ್ಬದ ವಿಶೇಷ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಚ್ಚಿಲಕ್ಕೆ ಭೇಟಿ ನೀಡುತ್ತಿದ್ದಾರೆ. ಹೆಜಮಾಡಿಯಲ್ಲಿ ಅಧಿಕೃತ ಸ್ವಾಗತ ಸ್ವೀಕರಿಸಲಿರುವ ಅವರು, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಹತ್ತಾರು ಪ್ರಮುಖ ಬೇಡಿಕೆಗಳ ಮಹಾಪೂರವನ್ನೇ ಅವರ ಮುಂದಿಟ್ಟಿದ್ದಾರೆ.

ಪ್ರಸ್ತುತ ಉಡುಪಿ ಜಿಲ್ಲೆಯು ಎಲ್ ನಿನೋ ಪ್ರಭಾವದಿಂದ ತೀವ್ರ ಮಳೆ ಕೊರತೆ ಎದುರಿಸುತ್ತಿದ್ದು, ಪ್ರಮುಖ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. ಅಂತರ್ಜಲ ಮಟ್ಟ ಕುಸಿದಿರುವುದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುವ ಆತಂಕ ಎದುರಾಗಿದೆ. ಇದರೊಂದಿಗೆ, ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾದ ಸಿಆರ್‌ಝೆಡ್ ನಿಯಂತ್ರಣ ವಲಯದ ಮಿತಿಯನ್ನು 200 ಮೀಟರ್‌ನಿಂದ 50 ಮೀಟರ್‌ಗೆ ಇಳಿಸುವ ದೀರ್ಘಕಾಲದ ಬೇಡಿಕೆ ಇನ್ನೂ ಬಾಕಿ ಉಳಿದಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗಿರುವ ಜನರ ಆತಂಕವನ್ನು ನಿವಾರಿಸಲು ಕೇರಳ ಮಾದರಿಯ ಭೌತಿಕ ಸಮೀಕ್ಷೆ ನಡೆಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಜಿಲ್ಲೆಯ ಪ್ರಮುಖ ಬೇಡಿಕೆಗಳಲ್ಲಿ ಉಡುಪಿಗೆ ಸುಸಜ್ಜಿತ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದು ಹಾಗೂ ಮುಚ್ಚಿ ಹೋಗಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದು ಮುಂಚೂಣಿಯಲ್ಲಿವೆ. ಅಲ್ಲದೆ, ಬ್ರಹ್ಮಾವರದಲ್ಲಿ ಕೃಷಿ ಕಾಲೇಜು, ಉಡುಪಿ ಮತ್ತು ಮಣಿಪಾಲದಲ್ಲಿ ಐಟಿ ಪಾರ್ಕ್ ಸ್ಥಾಪನೆ, ಮಲ್ಪೆ ಬಂದರಿನ ಮೂರನೇ ಹಂತದ ವಿಸ್ತರಣೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮರವಂತೆ ಬೀಚ್ ಅಭಿವೃದ್ಧಿ ಮತ್ತು ಕೊಲ್ಲೂರು-ಕೊಡಚಾದ್ರಿ ರೋಪ್‌ವೇ ಯೋಜನೆಗಳನ್ನು ಜಾರಿಗೆ ತರಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಮುಗಿದಿದ್ದರೂ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯಿಂದ ಉದ್ಘಾಟನೆ ವಿಳಂಬವಾಗಿದ್ದು, ಅದನ್ನು ಶೀಘ್ರವಾಗಿ ಲೋಕಾರ್ಪಣೆಗೊಳಿಸಬೇಕಿದೆ. ಸಿಎಂ ಭೇಟಿಯು ಈ ಎಲ್ಲಾ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಹೊಸ ವೇಗ ನೀಡಲಿದೆಯೇ ಎಂದು ಜಿಲ್ಲೆಯ ಬುದ್ಧಿವಂತ ಜನತೆ ಕಾತರದಿಂದ ಕಾಯುತ್ತಿದ್ದಾರೆ.