ಬ್ಯಾಂಕ್ ಆಫ್ ಬರೋಡಾ ವಿರುದ್ದ ಉದ್ಯಮಿ ಬಿಆರ್ ಶೆಟ್ಟಿ ಕಾನೂನು ಸಮರ : ಬಾಂಬೆ ಹೈಕೋರ್ಟ್ನಲ್ಲಿ 1.44 ಲಕ್ಷ ಕೋಟಿ ದಾವೆ
ಬಿ.ಆರ್. ಶೆಟ್ಟಿ ಅವರು ಯುಎಇನ ಪ್ರಖ್ಯಾತ ಉದ್ಯಮಿಯಾಗಿದ್ದರು. ಯುಎಇ ಎಕ್ಸ್ಚೇಂಜ್ ( UAE Exchange), ಎನ್ಎಂಸಿ ಹೇಲ್ತ್ಕೇರ್ ( NMC Health Care) ಸಂಸ್ಥೆ ಸ್ಥಾಪಿಸಿದ್ದರು.
By Arun Gundmi | ಅರುಣ್ ಗುಂಡ್ಮಿ · Editor-in-Chief
2 min read
ಮುಂಬೈ : ಯುಎಇಯ ಎನ್ಎಂಸಿ ಹೆಲ್ತ್ಕೇರ್ ಕಂಪೆನಿ ಸಂಸ್ಥಾಪಕ, ಕರಾವಳಿಯ ಖ್ಯಾತ ಉದ್ಯಮಿ ಬಿ.ಆರ್.ಶೆಟ್ಟಿ ( B R Shetty) ಅವರು ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ ( Bank Of Baroda) ವಿರುದ್ದ ಬಾಂಬೆ ಹೈಕೋರ್ಟ್ ( Bombay High Court) ಮೆಟ್ಟಿಲೇರಿದ್ದಾರೆ. ಅಲ್ಲದೇ ಬರೋಬ್ಬರಿ 15 ಬಿಲಿಯಲ್ ಅಂದ್ರೆ 1.44 ಲಕ್ಷ ಕೋಟಿ ರೂಪಾಯಿಯ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಕರ್ನಾಟಕದ ಉಡುಪಿ ಮೂಲದವರಾದ ಬಿ.ಆರ್. ಶೆಟ್ಟಿ ಅವರು ಯುಎಇನ ಪ್ರಖ್ಯಾತ ಉದ್ಯಮಿಯಾಗಿದ್ದರು. ಯುಎಇ ಎಕ್ಸ್ಚೇಂಜ್ ( UAE Exchange), ಎನ್ಎಂಸಿ ಹೇಲ್ತ್ಕೇರ್ ( NMC Health Care) ಸಂಸ್ಥೆಯನ್ನು ಸ್ಥಾಪಿಸಿದ್ದರು. ತಮ್ಮ ಒಡೆತನದ ಕಂಪೆನಿಗಳಲ್ಲಿ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಕೋರಿ ಬಿಆರ್ ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ದ ಮೊಕದ್ದಮೆ ದಾಖಲಿಸಿದ್ದಾರೆ.
ಉದ್ಯಮಿ ಬಿಆರ್ ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ವಿರುದ್ದ ಮೊಕದ್ದಮೆ ದಾಖಲಿಸುತ್ತಿದ್ದಂತೆಯೇ ಬ್ಯಾಂಕಿನ ಷೇರು ಮೌಲ್ಯದಲ್ಲಿ ಬಾರೀ ಇಳಿಕೆ ಕಂಡಿದೆ. ನಿನ್ನೆ 238 ರೂಪಾಯಿ ಬೆಲೆಯಲ್ಲಿ ವಹಿವಾಟು ಮುಗಿಸಿದ್ದ ಬ್ಯಾಂಕ್ ಆಫ್ ಬರೋಡಾದ ಷೇರುಗಳ ಮುಖ ಬೆಲೆ ಇಂದು 229 ರೂಪಾಯಿಗೆ ಕುಸಿತ ಕಂಡಿದೆ.
ಬ್ಯಾಂಕ್ ಆಫ್ ಬರೋಡಾದ ಮತ್ತು ಬ್ಯಾಂಕಿನ ಕೆಲವು ಅಧಿಕಾರಿಗಳು ಬಿಆರ್ ಶೆಟ್ಟಿ ಅವರಿಗೆ ಸೇರಿದ ಕಂಪೆನಿಗಳಿಗೆ ಸಂಬಂಧಿಸಿದ ವಂಚನೆ ವಹಿವಾಟುಗಳಿಗೆ ಸಹಕಾರ ನೀಡಿದ್ದಾರೆ. ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ಹಣವನ್ನು ವರ್ಗಾಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಕುರಿತು ದೂರು ನೀಡಿದ್ದರೂ ಕೂಡ ಬ್ಯಾಂಕ್ ಅದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಬಿಆರ್ ಶೆಟ್ಟಿ ಆರೋಪ ಮಾಡಿದ್ದಾರೆ.
ನಕಲಿ ಸಹಿಯನ್ನು ಬಳಸಿಕೊಂಡು ಪರ್ಸನಲ್ ಗ್ಯಾರಂಟಿಗಳನ್ನು ಬಳಸಿ ಸಾಲವನ್ನು ಪಡೆಯಲಾಗಿದೆ. ಅಕ್ರಮ ವಹಿವಾಟಿನಿಂದ ತನಗೆ ಹಾಗೂ ತಮ್ಮ ಸಂಸ್ಥೆಗೆ ಆಗಿರುವ ನಷ್ಟಕ್ಕೆ 5 ಬಿಲಿಯನ್ ಡಾಲರ್, ವ್ಯಾಪಾರ ನಷ್ಟಕ್ಕೆ 5 ಬಿಲಿಯನ್ ಡಾಲರ್ ಹಾಗೂ ಮಾರುಕಟ್ಟೆಯಲ್ಲಿ ಕೆಟ್ಟ ಹೆಸರು ಬರುವಂತೆ ಮಾಡಿರುವ ಪರಿಹಾರಕ್ಕಾಗಿ 5 ಬಿಲಿಯನ್ ಡಾಲರ್ ಸೇರಿದಂತೆ 15 ಬಿಲಿಯನ್ ಡಾಲರ್ ಮೊತ್ತದ ನಷ್ಟ ಪರಿಹಾರಕ್ಕಾಗಿ ಅವರು ಆಗ್ರಹಿಸಿದ್ದಾರೆ.
ಪರಿಹಾರ ಹಣದ ಜೊತೆಗೆ ವಾರ್ಷಿಕವಾಗಿ ಶೇಕಡಾ 18ರಷ್ಟು ಬಡ್ಡಿಯನ್ನೂ ನೀಡಬೇಕು. ಇನ್ನು ಬ್ಯಾಂಕುಗಳ ದಾಖಲೆ, ಆಂತರಿಕ ನಿಯಮಗಳ ದಾಖಲೆಯನ್ನು ಬಹಿರಂಗ ಪಡಿಸಬೇಕು ಎಂದು ಬಿಆರ್ ಶೆಟ್ಟಿ ಅವರು ಬಾಂಬೆ ಹೈಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಸದ್ಯ ಉದ್ಯಮಿ ಬಿಆರ್ ಶೆಟ್ಟಿ ಅವರು ನೀಡಿರುವ ದೂರು ಬಾರೀ ಚರ್ಚೆಯನ್ನು ಹಟ್ಟುಹಾಕಿದೆ.
ಸ್ಪಷ್ಟನೆ ನೀಡಿದ ಬ್ಯಾಂಕ್ ಆಫ್ ಬರೋಡಾ
ಉದ್ಯಮಿ ಬಿಆರ್ ಶೆಟ್ಟಿ ಅವರು ಮಾಡಿರುವ ಆರೋಪಗಳನ್ನು ಬ್ಯಾಂಕ್ ಆಫ್ ಬರೋಡಾ ತಳ್ಳಿ ಹಾಕಿದೆ. ಬ್ಯಾಂಕ್ ಆಫ್ ಬರೋಡಾ ಈ ಕುರಿತು ಪ್ರತಿಕ್ರೀಯೆ ನೀಡಿದ್ದು, ಬಿಆರ್ ಶೆಟ್ಟಿ ಅವರು ಮಾಡಿರುವ ಎಲ್ಲಾ ಆರೋಪಗಳಿಗೆ ನ್ಯಾಯಾಲಯದಲ್ಲಿ ಸಮರ್ಥ ಉತ್ತರವನ್ನು ನೀಡುತ್ತೇವೆ. ಆದರೆ ಇದುವರೆಗೆ ಮೊಕದ್ದಮೆ ದಾಖಲಾಗಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಟಿವಿ9 ವರದಿ ಮಾಡಿದೆ.
ಮೊಕದ್ದಮೆಯ ದಾಖಲೆ ಲಭ್ಯವಾದ ನಂತರದಲ್ಲಿ ಈ ಕುರಿತು ಮುಂದಿನ ಕ್ರಮಕೈಗೊಳ್ಳುತ್ತೇವೆ.ಬಿಆರ್ ಶೆಟ್ಟಿ ಅವರು 2024ರ ಜುಲೈನಲ್ಲಿ ನ್ಯೂಯಾರ್ಕ್ನಲ್ಲಿ ಇದೇ ರೀತಿಯಲ್ಲಿ ಸಲ್ಲಿಕೆ ಮಾಡಿದ್ದ ಮೊಕದ್ದಮೆ ವಜಾಗೊಂಡಿತ್ತು. ಇದೀಗ ಬಾಂಬೆ ಹೈಕೋರ್ಟ್ನಲ್ಲಿಯೂ ನಮಗೆ ಗೆಲುವು ಸಿಗುವ ವಿಶ್ವಾಸ ಇದೆ ಎಂದು ಬ್ಯಾಂಕ್ ಆಫ್ ಬರೋಡಾ ನಿರೀಕ್ಷೆ ಇಟ್ಟುಕೊಂಡಿದೆ.
ಬಿಆರ್ ಶೆಟ್ಟಿ ಅವರಿಂದ 2800 ಕೋಟಿ ರೂ. ಬಾಕಿ ವಸೂಲಿ
ಉದ್ಯಮಿ ಬಿಆರ್ ಶೆಟ್ಟಿ ಅವರಿಂದ 2800 ಕೋಟಿ ರೂಪಾಯಿ ಬಾಕಿ ವಸೂಲಿಯಲ್ಲಿ ಇರುವ ಬ್ಯಾಂಕ್ ಬಿಆರ್ ಶೆಟ್ಟಿ ಅವರಿಂದ ಬ್ಯಾಂಕಿಗೆ ಬರಬೇಕಾಗಿರುವ ಸುಮಾರು 2800 ಕೋಟಿ ರೂಪಾಯಿಗಳಷ್ಟು ಹಣದ ವಸೂಲಾತಿ ಮಾಡುವ ಕುರಿತು ಭಾರತ ಮತ್ತು ಯುಎಇಯಲ್ಲಿ ಕಾನೂನು ಕ್ರಮಗಳನ್ನು ಮುಂದುವರಿಸಿದೆ ಎಂದು ಬ್ಯಾಂಕ್ ಆಫ್ ಬರೋಡಾ ಸ್ಪಷ್ಟಪಡಿಸಿದೆ.
Topics

