Kannada News Next

udupi

ಡೇವಿಡ್ ಡಿಸೋಜ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿ

ಉತ್ತರಾಖಂಡ ಮೂಲದ ಆಕಾಶ್‌ ಅಲಿಯಾಸ್‌ ಅನ್ಮೋಲ್ ರಸ್ತಗಿ ಮತ್ತು ಬಿಹಾರ ಮೂಲದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಎಂಬವರನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿ ಒಪ್ಪಿಸಿದೆ,

By ಅಶ್ವಥ್ ಆಚಾರ್ಯ | Ashwath Acharya
Congress Leader David DSouza Shot case Major Updates

ಉಡುಪಿ ( Udupi) : ಗುತ್ತಿಗೆದಾರ ಹಾಗೂ ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ಆರೋಪಿಗಳಿಗೆ ಉಡುಪಿ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.

ಉತ್ತರಾಖಂಡ ಮೂಲದ ಆಕಾಶ್‌ ಅಲಿಯಾಸ್‌ ಅನ್ಮೋಲ್ ರಸ್ತಗಿ ಮತ್ತು ಬಿಹಾರ ಮೂಲದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಎಂಬವರನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿ ಒಪ್ಪಿಸಿದೆ, ಸದ್ಯ ಇಬ್ಬರೂ ಆರೋಪಿಗಳು ಇದುವರೆಗೂ ನ್ಯಾಯಾಂಗ ಬಂಧನದಲ್ಲಿದ್ದರು.

ಕಾಪು ಪೊಲೀಸ್ ನಿರೀಕ್ಷಕ ಅಝ್ಮತ್ ಅಲಿ ನೇತೃತ್ವದ ಪೊಲೀಸರು ತಂಡ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆಯಲ್ಲಿ ಪ್ರಕರಣದ ತನಿಖೆಗಾಗಿ ಹೆಚ್ಚಿನ ವಿಚಾರಣೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಪೊಲೀಸರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಪುರುಷೋತ್ತಮ ಅವರು ಇಬ್ಬರು ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದಾರೆ.

ಬಯಲಾಗುತ್ತಾ ಡೇವಿಡ್‌ ಡಿಸೋಜಾ ಹತ್ಯೆ ರಹಸ್ಯ ?

ಗುತ್ತಿಗೆದಾರ ಡೇವಿಡ್‌ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪಾತ್ರದ ಕುರಿತು ಈಗಾಗಲೇ ತನಿಖೆ ನಡೆಸಿರುವ ಪೊಲೀಸರು, ಪೊಲೀಸ್‌ ಕಸ್ಟಡಿಯಲ್ಲಿ ಆರೋಪಿಗಳಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ. ಹತ್ಯೆಗೆ ಸಂಚು ರೂಪಿಸಿದ್ದು ಯಾರು ? ಹತ್ಯೆಯ ಹಿಂದಿನ ಕಾರಣವೇನು ? ಆರೋಪಿಗಳಿಗೆ ಸುಫಾರಿ ಕೊಟ್ಟಿದ್ಯಾರು ಅನ್ನೋ ಎಲ್ಲಾ ಮಾಹಿತಿಯನ್ನು ಪೊಲೀಸರು ಕಲೆ ಹಾಕಲಿದ್ದಾರೆ.

ಅಷ್ಟೇ ಅಲ್ಲದೇ ಹತ್ಯೆಗೂ ಮೊದಲೇ ಆರೋಪಿಗಳ ಚಲನವಲನ, ಬಳಸಿದ ವಾಹನಗಳು, ಸಂಪರ್ಕದಲ್ಲಿದ್ದ ವ್ಯಕ್ತಿಗಳು ಹಾಗೂ ಹತ್ಯೆಯ ಬಳಿಕ ಪರಾರಿಯಾಗಲು ಕೈಗೊಂಡಿದ್ದ ಕ್ರಮಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕೇವಲ ಮೂರು ಮಂದಿಯಷೇ ಅಲ್ಲಾ, ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ.

ಆರೋಪಿಗಳ ಹೇಳಿಕೆ ಹಾಗೂ ಲಭ್ಯವಾಗಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ಹತ್ಯೆಯ ಸಂಚಿನಲ್ಲಿ ಇತರರ ಪಾತ್ರವಿದೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವುಗಳು ಲಭ್ಯವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಡೇವಿಡ್ ಡಿಸೋಜ ಅವರ ಹತ್ಯೆ ಪ್ರಕರಣವು ಮುದರಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಹಿಂದೆ ಇರುವ ಸಂಪೂರ್ಣ ಜಾಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.