ಉಡುಪಿ : ರಜೆಗೆ ತೆರಳಿದ್ದ ಶಿಕ್ಷಕಿ ಮನೆಗೆ ಕನ್ನ : ಟೆರೇಸ್ ಬಾಗಿಲು ಮುರಿದು 12 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ದೋಚಿದ ಖದೀಮರು
ಉಡುಪಿ ನಗರ ಕೊಡಂಕೂರು ಪುತ್ತೂರು ಗ್ರಾಮದ ಸಾಯಿಬಾಬಾ ನಗರದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಶಶಿರೇಖಾ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
By ಅಶ್ವಥ್ ಆಚಾರ್ಯ | Ashwath Acharya
1 min read
ಉಡುಪಿ : ರಜೆಯ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದ ವೇಳೆಯಲ್ಲಿ ಕಳ್ಳರು ಟೆರೇಸ್ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತು ಹಾಗೂ ನಗದನ್ನು ದೋಚಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ನಗರ ಕೊಡಂಕೂರು ಪುತ್ತೂರು ಗ್ರಾಮದ ಸಾಯಿಬಾಬಾ ನಗರದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಶಶಿರೇಖಾ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಶಿರೇಖಾ ಅವರು ಮೈಸೂರಿನ ಹುಣಸೂರು ಬಾಲಕಿಯರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
ಬೇಸಿಗೆ ರಜೆಯ ನಿಮಿತ್ತ ಉಡುಪಿ ಬೆ ಬಂದಿದ್ದು, ಮೇ 25 ರಂದು ಮನೆಗೆ ಬೀಗ ಹಾಕಿ ಮೈಸೂರಿಗೆ ತೆರಳಿದ್ದರು. ಆದರೆ ಅಗಸ್ಟ್ 9ರಂದು ರಾತ್ರಿ 1.30ರ ಸುಮಾರಿಗೆ ಮನೆಗೆ ಬಂದಾಗ ಕಳ್ಳತನದ ಕೃತ್ಯ ಬಯಲಾಗಿದೆ.
ಮನೆಯ ಪ್ರವೇಶದ್ವಾರವನ್ನು ಆಯುಧದಿಂದ ಮೀಟಿ ತೆರೆಯಲು ಕಳ್ಳರು ಯತ್ನಿಸಿದ್ದರು. ನಂತರ ದಕ್ಷಿಣ ಬದಿಯ ಗೋಡೆಯನ್ನು ಹತ್ತಿ ಟೆರೇಸ್ ಮೇಲಿನ ಬಾಗಿಲನ್ನು ಮೀಟಿ ಮನೆಯ ಒಳಗೆ ಪ್ರವೇಶಿಸಿದ್ದಾರೆ.
ಬೆಡ್‌ರೂಮ್‌ನಲ್ಲಿದ್ದ ಕೀ ಬಳಸಿ ಕಬೋರ್ಡ್ ಮತ್ತು ಬೀರು ಬಾಗಿಲನ್ನು ತೆರೆದು ವಸ್ತುಗಳನ್ನು ಅಸ್ತವ್ಯಸ್ತಗೊಳಿಸಿದ್ದಾರೆ. ಅಲ್ಲದೇ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗನ್ನು ದೋಚಿ ಪರಾರಿಯಾಗಿದ್ದಾರೆ. ಒಟ್ಟು 100 ಗ್ರಾಂ ಚಿನ್ನದ ಸರ, 10 ಲಕ್ಷ ರೂಪಾಯಿ ಮೌಲ್ಯ ಚಿನ್ನದ ಕಾಯಿನ್ ಅಷ್ಟೇ ಅಲ್ಲದ ಬೆಳ್ಳಿಯ ಚೆಂಬು, ಹರಿವಾಣ, ಪಂಚಪಾತ್ರೆ, ತಟ್ಟೆ, ದೀಪಗಳನ್ನು ಕಳವು ಮಾಡಲಾಗಿದೆ.
ಸುಮಾರು 40 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು 12 ಲಕ್ಷ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Topics

