Udupi : ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ: ಭಟ್ಕಳಕ್ಕೆ ಬಸ್ ನಲ್ಲಿ ತೆರಳುತ್ತಿದ್ದ ಮೂವರು ಆರೋಪಿಗಳ ಬಂಧನ
ಪ್ರಕರಣದ ತನಿಖೆ ಮುಂದುವರಿದಿದ್ದ ವೇಳೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್ಸಿನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
By Kannada News Next Admin · Administrator
2 min read
ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ ಪ್ರಮುಖ ಆರೋಪಿ ರಾಜು ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಆಗಸ್ಟ್ 7, 2026ರಂದು ಮಧ್ಯಾಹ್ನ 3.45ರ ಸುಮಾರಿಗೆ ಮುದರಂಗಡಿಯ ಸೇಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಘಟನೆ ನಡೆದಿದೆ. ಇದೇ ಆವರಣದಲ್ಲಿ ಡೇವಿಡ್ ಡಿಸೋಜಾ ಅವರು ‘ಪ್ರಿನ್ಸ್ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಉದ್ಯಮದ ಕಚೇರಿ ಹೊಂದಿದ್ದರು. ಕಚೇರಿಗೆ ಆಗಮಿಸಿ ಬಳಿಕ ತಮ್ಮ ಥಾರ್ ವಾಹನದ ಚಾಲಕನ ಬದಿಯ ಬಾಗಿಲ ಬಳಿ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದಿದ್ದ ಅಪರಿಚಿತ ಆರೋಪಿಗಳ ಪೈಕಿ ಓರ್ವ ಪಿಸ್ತೂಲ್‌ನಿಂದ ಡೇವಿಡ್ ಡಿಸೋಜಾ ಅವರ ತಲೆಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಡೇವಿಡ್ ಡಿಸೋಜಾ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103, 3(5) ಹಾಗೂ Arms Actನ ಕಲಂ 3 ಮತ್ತು 25ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಬಸ್ಸಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳು:
ಪ್ರಕರಣದ ತನಿಖೆ ಮುಂದುವರಿದಿದ್ದ ವೇಳೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್ಸಿನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಬೈಂದೂರಿನ ಒತ್ತಿನಾಣೆ ಬಳಿ ಬಸ್ಸನ್ನು ತಡೆದು ತಪಾಸಣೆ ನಡೆಸಿದ್ದಾರೆ.
ಈ ವೇಳೆ ಬಸ್ಸಿನಲ್ಲಿದ್ದ ಮೂವರು ಆರೋಪಿಗಳು ಕೆಳಗಿಳಿದು ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಹಿಡಿಯಲು ಮುಂದಾದಾಗ ರಾಜು ಎಂಬ ಆರೋಪಿ ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ತೇಜಸ್ವಿ ಅವರನ್ನು ದೂಡಿ ಹಾಕಿ, ತನ್ನ ಬಳಿ ಇದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ರಾಜುವಿನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ ಪಿಸ್ತೂಲ್‌ನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ರಾಜು ಡೇವಿಡ್ ಡಿಸೋಜಾ ಅವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಮುಖ ಆರೋಪಿಯಾಗಿದ್ದಾನೆ. ಪೊಲೀಸರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜು ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಡಿ ಮತ್ತೊಂದು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಇನ್ನಿಬ್ಬರು ಆರೋಪಿಗಳೂ ಪೊಲೀಸರ ವಶಕ್ಕೆ:
ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23) ಎಂಬಾತನನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಹಾಗೂ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ಎಂಬಾತನನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಪಿಎಸ್‌ಐ ತೇಜಸ್ವಿಗೂ ಗಾಯ ಆರೋಪಿಗಳನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ತೇಜಸ್ವಿ ಅವರಿಗೆ ಗಾಯಗಳಾಗಿವೆ. ಸದ್ಯ ಅವರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ರಾಜುವಿಗೂ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ವೇಳೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಹಾಗೂ ಬಳಿಕ ಎರ್ಮಾಳ್‌ನಲ್ಲಿ ಬಿಟ್ಟು ಹೋಗಿದ್ದ ಮೋಟಾರ್ ಸೈಕಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಣಕಾಸಿನ ವೈಮನಸ್ಸೇ ಕೊಲೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಡೇವಿಡ್ ಡಿಸೋಜಾ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪನಿಯೊಂದರೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಡೇವಿಡ್ ಡಿಸೋಜಾ ಅವರನ್ನು ಹತ್ಯೆ ಮಾಡಲು ಸುಪಾರಿ ನೀಡಿರುವ ಶಂಕೆ ವ್ಯಕ್ತವಾಗಿದೆ.
ಈ ಕೃತ್ಯಕ್ಕೆ ಸಹಕರಿಸಿದವರು, ಆರೋಪಿಗಳಿಗೆ ಹಣಕಾಸಿನ ನೆರವು ನೀಡಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆ ಕಾರ್ಯ ಇನ್ನೂ ಬಾಕಿ ಇದೆ. ಪ್ರಕರಣದ ಹಿಂದಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಲವು ಪೊಲೀಸ್ ತಂಡಗಳ ಕಾರ್ಯಾಚರಣೆ:
ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ ಜಿ., ಡಿಎಸ್‌ಬಿ ವಿಭಾಗದ ಪಿಐ ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಬೈಂದೂರು ಪಿಎಸ್‌ಐ ಮಹೇಶ್, ಕಾಪು ಪಿಎಸ್‌ಐ ತೇಜಸ್ವಿ, ಶಿರ್ವ ಪಿಎಸ್‌ಐ ಮಂಜುನಾಥ ಮರಬದ, ಕೊಲ್ಲೂರು ಪಿಎಸ್‌ಐ ವಿನಯ್, ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ.ಎಸ್., ಪಡುಬಿದ್ರಿ ಪಿಎಸ್‌ಐ ಶಕ್ತಿವೇಲು ಹಾಗೂ ಅನಿಲ್, ಶಿರ್ವ ಪಿಎಸ್‌ಐ ಲೋಹಿತ್ ಕುಮಾರ್, ಪ್ರೊಬೆಷನರಿ ಪಿಎಸ್‌ಐ ಶಿಫಾಝ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದರ ಜೊತೆಗೆ ಭಟ್ಕಳ ಮತ್ತು ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿಗಳು, ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಉಡುಪಿ ಸಿಡಿಆರ್ ಸೆಲ್ ತಂಡಗಳು ಕಾರ್ಯಾಚರಣೆಗೆ ಸಹಕರಿಸಿವೆ. ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ವಶಕ್ಕೆ ಪಡೆದಿರುವ ಪೊಲೀಸರು, ಇದೀಗ ಕೊಲೆಯ ಹಿಂದಿರುವ ಸುಪಾರಿ ಜಾಲ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
Topics

