ಉಡುಪಿ : ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಆರೋಪಿಸಿ ಗುಜರಿ ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿ 2 ಲಕ್ಷ ಹಣಕ್ಕೆ ಬೇಡಿಕೆಯಿಟ್ಟ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆ.31ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಎರಡನೇ ಆರೋಪಿ ಸಚಿನ್ ಕರೆ ಮಾಡಿ, ಎರಡು ಚೀಲ ಅಕ್ಕಿಯನ್ನು ದೂರುದಾರರ ಮನೆಯ ಅಂಗಳದಲ್ಲಿ ಇರಿಸಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೂರುದಾರರು ಮನೆಗೆ ಆಗಮಿಸಿದಾಗ ಸಚಿನ್ ಆಟೋರಿಕ್ಷಾದಲ್ಲಿ ಹಾಗೂ ನಾಗೇಂದ್ರ ಪುತ್ರನ್ ಮತ್ತು ಪ್ರದೀಪ್ ಅಲಿಯಾಸ್ ಎಸ್‌ಟಿಡಿ ಪ್ರದೀಪ್ ಬೈಕ್‌ನಲ್ಲಿ ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ನಾಗೇಂದ್ರ ಪುತ್ರನ್ ತಾನು ಸಾಮಾಜಿಕ ಕಾರ್ಯಕರ್ತನೆಂದು ಪರಿಚಯಿಸಿಕೊಂಡು, ಮನೆಯ ಅಂಗಳದಲ್ಲಿದ್ದ ಅಕ್ಕಿ ಚೀಲಗಳ ದೃಶ್ಯವನ್ನು ಚಿತ್ರೀಕರಿಸಿರುವುದಾಗಿ ಹೇಳಿದ್ದಾನೆ. ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣದಿಂದ ತಪ್ಪಿಸಿಕೊಳ್ಳಬೇಕಾದರೆ 2 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡಲು ಸಾಧ್ಯವಿಲ್ಲ ಎಂದು ದೂರುದಾರರು ತಿಳಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಬಳಿಕ 1 ಲಕ್ಷ ನೀಡಬೇಕು, ಇಲ್ಲವಾದರೆ ಜನರನ್ನು ಹಾಗೂ ತನ್ನ ಹುಡುಗರನ್ನು ಕರೆಸಿ ಹೊಡೆದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸುಮಾರು ಮಧ್ಯಾಹ್ನ 2.45ರವರೆಗೂ ಹಣ ನೀಡದೆ ಸ್ಥಳದಿಂದ ತೆರಳುವುದಿಲ್ಲ ಎಂದು ಆರೋಪಿ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಈ ವೇಳೆ ದೂರುದಾರರ ಮಕ್ಕಳು ಸ್ಥಳಕ್ಕೆ ಆಗಮಿಸಿದಾಗ ಆರೋಪಿಗಳು ಮತ್ತೆ ಅವಾಚ್ಯವಾಗಿ ನಿಂದಿಸಿ ಅಲ್ಲಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿ ದೂರುದಾರರು ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಬೆದರಿಕೆ, ಹಣಕ್ಕೆ ಬೇಡಿಕೆ ಹಾಗೂ ಇತರ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.