Kannada News Next

udupi

ಕುಂದಾಪುರ : ಗಾಂಧಿ ಜಯಂತಿ ಅಂಗವಾಗಿ ಕೋಡಿ ಕಡಲತೀರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಗಾಂಧೀಜಿಯವರ ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವುದರ ಜತೆಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬೃಹತ್ ಅಭಿಯಾನ ಆಯೋಜಿಸಲಾಗಿತ್ತು.

By Arun Gundmi | ಅರುಣ್‌ ಗುಂಡ್ಮಿ Editor-in-Chief
Kundapura Kodi Beach Cleanliness Drive Gandhi Jayanti 1

ಕುಂದಾಪುರ : ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರೀ ಅವರ ಜಯಂತಿಯ ಅಂಗವಾಗಿ ಲಯನ್ಸ್ ಇಂಟರ್‌ನ್ಯಾಷನಲ್ ವಲಯ 1, ಪ್ರಾಂತ್ಯ 2 ಹಾಗೂ ಜಿಲ್ಲೆ 317ಸಿ ವತಿಯಿಂದ ಕುಂದಾಪುರದ ಕೋಡಿ ಬೀಚ್‌ ನಲ್ಲಿ ಬೃಹತ್‌ ಸ್ವಚ್ಚತಾ ಅಭಿಯಾನ ನಡೆಯಿತು.

ಕುಂದಾಪುರದ ಕೋಡಿ ಚಕ್ರೇಶ್ವರಿ ಬೀಚ್ ಸಮೀಪ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ನಡೆದ ಬೃಹತ್‌ ಕಡಲ ತೀರ ಸ್ವಚ್ಚತಾ ಅಭಿಯಾನದಲ್ಲಿ ಲಯನ್ಸ್ ಕ್ಲಬ್‌ನ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ಕಡಲತೀರದ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

Kundapura Kodi Beach Cleanliness Drive Gandhi Jayanti

ಗಾಂಧೀಜಿಯವರ ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವುದರ ಜತೆಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬೃಹತ್ ಅಭಿಯಾನ ಆಯೋಜಿಸಲಾಗಿತ್ತು. ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ 317ಸಿ ಗವರ್ನರ್ ಪಿಎಂಜೆಎಫ್ ಲಯನ್ ರಾಜೀವ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ವಲಯ 1, ವಲಯ 2 ಹಾಗೂ ವಲಯ 3ರ ವ್ಯಾಪ್ತಿಯ ವಿವಿಧ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರು ಮತ್ತು ಸದಸ್ಯರು ಅಭಿಯಾನದಲ್ಲಿ ಭಾಗವಹಿಸಿದರು. ಕುಂದಾಪುರ ಅಮೃತಧಾರಾ, ಕುಂದಾಪುರ ಇಂಜಿನಿಯರ್ಸ್, ಕುಂದಾಪುರ ಕೋಸ್ಟಲ್ ಹಾಗೂ ಕುಂದಾಪುರ ಲಯನ್ಸ್ ಕ್ಲಬ್‌ಗಳ ಸದಸ್ಯರು ಸೇರಿದಂತೆ ಟೆಕ್ಕಟ್ಟೆ, ಬನ್ನಾಡಿ ವಡ್ಡರ್ಸೆ, ಬ್ರಹ್ಮಾವರ ಬಾರ್ಕೂರು, ಕೋಟ ಗಿಳಿಯಾರ್, ಕೋಟೇಶ್ವರ, ಮೊಳಹಳ್ಳಿ ಶಿವಶಾಂತಿ ಹುಣಸೆಮಕ್ಕಿ, ಹಾಲಾಡಿ ಬಿಡ್ಕಟ್ಟೆ ಹಾಗೂ ಆರ್ಡಿ ಬೆಳ್ಳೆ ಗೋಳಿಯಂಗಡಿ ಲಯನ್ಸ್ ಕ್ಲಬ್‌ಗಳ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಟೂರಿಸ್ಟ್‌ ವಾಹನಗಳಲ್ಲಿ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶಕ್ಕೆ ಲಯನ್ಸ್‌ ಅಮೃತಧಾರ ವತಿಯಿಂದ ಡಾ.ವಾಣೀಶ್ರೀ ಐತಾಳ್‌ ನೇತೃತ್ವದಲ್ಲಿ ಟೂರಿಸ್ಟ್‌ ವಾಹನಗಳಿಗೆ ಕಸದ ಬುಟ್ಟಿ ನೀಡಿ ಜಾಗೃತಿ ಮೂಡಿಸಲಾಯಿತು.

Kundapura Kodi Beach Cleanliness Drive Gandhi Jayanti ೨

ಸಮುದ್ರ ಮತ್ತು ಕಡಲತೀರಗಳು ಪ್ರಕೃತಿಯ ಅಮೂಲ್ಯ ಸಂಪತ್ತಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಕಡಲತೀರಗಳಲ್ಲಿ ಎಸೆಯುವ ಪ್ಲಾಸ್ಟಿಕ್, ಬಾಟಲಿಗಳು ಮತ್ತು ಇತರ ತ್ಯಾಜ್ಯಗಳು ಸಮುದ್ರ ಪರಿಸರಕ್ಕೆ ಗಂಭೀರ ಸವಾಲಾಗಿವೆ. ಇಂತಹ ತ್ಯಾಜ್ಯಗಳು ಸಮುದ್ರದ ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡುವುದಲ್ಲದೆ, ಮೀನುಗಳು ಸೇರಿದಂತೆ ಸಮುದ್ರ ಜೀವಿಗಳ ಬದುಕಿಗೂ ಅಪಾಯ ತಂದೊಡ್ಡುತ್ತವೆ.

ಕಡಲತೀರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರದ ಅಲೆಗಳೊಂದಿಗೆ ನೀರಿಗೆ ಸೇರಿ ಸೂಕ್ಷ್ಮ ಪ್ಲಾಸ್ಟಿಕ್ ಮಾಲಿನ್ಯಕ್ಕೂ ಕಾರಣವಾಗಬಹುದು. ಇದರಿಂದ ಸಮುದ್ರದ ಪರಿಸರ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ಕಡಲತೀರಗಳ ಸ್ವಚ್ಛತೆ ಕೇವಲ ಸೌಂದರ್ಯಕ್ಕೆ ಸೀಮಿತವಾಗಿರದೆ, ಸಮುದ್ರ ಜೀವಿಗಳ ರಕ್ಷಣೆ, ಪರಿಸರ ಸಮತೋಲನ ಮತ್ತು ಮುಂದಿನ ಪೀಳಿಗೆಯ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿರುವ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಹಮ್ಮಿಕೊಂಡಿರುವ ಬೃಹತ್ ಸ್ವಚ್ಛತಾ ಅಭಿಯಾನವು ಕೇವಲ ಕಸ ಸಂಗ್ರಹಿಸುವ ಕಾರ್ಯಕ್ರಮವಾಗಿರದೆ, ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜವಾಬ್ದಾರಿ ಮತ್ತು ಜಾಗೃತಿ ಮೂಡಿಸುವ ಮಹತ್ವದ ಪ್ರಯತ್ನವಾಗಿತ್ತು.

ಕಡಲತೀರಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಪರಿಸರ ಸ್ನೇಹಿ ನಡವಳಿಕೆ ಅಳವಡಿಸಿಕೊಳ್ಳುವ ಮೂಲಕ ಇಂತಹ ಅಭಿಯಾನಗಳಿಗೆ ಸಹಕರಿಸಬೇಕೆಂಬ ಸಂದೇಶವನ್ನು ಈ ಕಾರ್ಯಕ್ರಮ ನೀಡಿತು.