News Next Kannada

udupi

ಉಡುಪಿಯಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಧಿಡೀರ್ ದಾಳಿ: ಕೃತಕ ರಾಸಾಯನಿಕ ವಶ!

ಉಡುಪಿಯ ವಿವಿಧೆಡೆಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳ ತಂಡ ಗುರುವಾರ ಮುಂಜಾನೆ ಏಕಕಾಲದಲ್ಲಿ ಧಿಡೀರ್ ದಾಳಿ ನಡೆಸಿದೆ.

By Meghana Pranuth | ಮೇಘನಾ ಪ್ರಣೂತ್‌
Banana Godown Raid Udupi

ಉಡುಪಿ: ಉಡುಪಿಯ ವಿವಿಧೆಡೆ ಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ಹಾನಿಕಾರಕ ರಾಸಾಯನಿಕ ಬಳಸುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ತಾಲೂಕಿನ ಪ್ರಮುಖ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳ ತಂಡ ಗುರುವಾರ ಮುಂಜಾನೆ ಏಕಕಾಲದಲ್ಲಿ ಧಿಡೀರ್ ದಾಳಿ ನಡೆಸಿದೆ.

ಉಡುಪಿ ಸಮೀಪದ ಅಲೆವೂರು, ಕೆಮ್ತೂರು ಹಾಗೂ ಮಣಿಪಾಲದ ದುಗ್ಲಿ ಪರಿಸರದಲ್ಲಿರುವ ರಖಂ ವ್ಯಾಪಾರಸ್ಥರು ಮತ್ತು ದಾಸ್ತಾನುದಾರರ ಗೋದಾಮುಗಳ ಮೇಲೆ ಈ ದಾಳಿ ನಡೆದಿದೆ. ಸಹಾಯಕ ಕಮಿಷನರ್ (AC) ರಶ್ಮಿ ಎಸ್.ಆರ್. ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸಂಬಂಧಿತ ಇಲಾಖಾ ಅಧಿಕಾರಿಗಳ ತಂಡ ಈ ಜಂಟಿ ಪರಿಶೀಲನೆ ನಡೆಸಿತು.

ದಾಳಿಯ ವೇಳೆಯಲ್ಲಿ ಬಾಳೆಹಣ್ಣುಗಳನ್ನು ವೇಗವಾಗಿ ಹಾಗೂ ಆಕರ್ಷಕವಾಗಿ ಹಣ್ಣಾಗಿಸಲು ಬಳಸಲಾಗುತ್ತಿದ್ದ ಆರೋಗ್ಯಕ್ಕೆ ತೀವ್ರ ಹಾನಿಕರವಾದ ಕೆಮಿಕಲ್‌ಗಳು, ಕೃತಕ ಬಣ್ಣ ನೀಡುವ ದ್ರಾವಣಗಳು ಮತ್ತು ಅವುಗಳನ್ನು ಸಿಂಪಡಿಸಲು ಉಪಯೋಗಿಸುತ್ತಿದ್ದ ಉಪಕರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಅಕ್ರಮ ಕೃತ್ಯಕ್ಕೆ ಬಳಸಲಾಗುತ್ತಿದ್ದ ಕೆಲವು ವಾಹನಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.

ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಿ, ನಿಷೇಧಿತ ರಾಸಾಯನಿಕ ಬಳಸಿ ಬಾಳೆಹಣ್ಣು ಹಣ್ಣಾಗಿಸುತ್ತಿದ್ದ ಆರೋಪದಡಿಯಲ್ಲಿ ಹಲವು ದಾಸ್ತಾನುದಾರರು ಹಾಗೂ ವ್ಯಾಪಾರಿಗಳ ವಿರುದ್ಧ ಕಾನೂನುಬದ್ಧ ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಇಂತಹ ಕೃತಕ ಹಣ್ಣಾಗಿಸುವ ಪ್ರಕ್ರಿಯೆಗಳ ವಿರುದ್ಧ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈ ಕಾರ್ಯಾಚರಣೆ ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದೆ.