ಸತ್ತಿದ್ದಾನೆಂದಿದ್ದ ಭೂಗತ ಪಾತಕಿ ಮತ್ತೆ ಸಕ್ರಿಯ: ಉಡುಪಿಯ ಶೂಟೌಟ್ ಬೆನ್ನಲ್ಲೇ ಹೆಚ್.ಪಿ ಹೆಸರಿನ ಬೆದರಿಕೆ ಕರೆ

ಉಡುಪಿಯಲ್ಲಿ ನಡೆದ ಉದ್ಯಮಿ ಡೇವಿಡ್ ಹತ್ಯೆ ಪ್ರಕರಣ ಈಗ ಇಡೀ ಕರಾವಳಿ ಹಾಗೂ ಮುಂಬೈ ಭೂಗತ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
HP
HP

ಉಡುಪಿಯಲ್ಲಿ ನಡೆದ ಉದ್ಯಮಿ ಡೇವಿಡ್ ಹತ್ಯೆ ಪ್ರಕರಣ ಈಗ ಇಡೀ ಕರಾವಳಿ ಹಾಗೂ ಮುಂಬೈ ಭೂಗತ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕಳೆದ 2013ರಲ್ಲೇ ನಿಗೂಢವಾಗಿ ಕಣ್ಮರೆಯಾಗಿ, ಸತ್ತಿದ್ದಾನೆ ಎಂದೇ ಭಾವಿಸಲಾಗಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಅಲಿಯಾಸ್ 'HP' ಮತ್ತೆ ಬದುಕಿ ಬಂದಿದ್ದಾನಾ? ಉಡುಪಿಯ ಶೂಟೌಟ್ ಪ್ರಕರಣದ ಬೆನ್ನಲ್ಲೇ ಲಭ್ಯವಾಗಿರುವ ಆಡಿಯೋ ಕ್ಲಿಪ್‌ಗಳು ಈಗ ಪೊಲೀಸರ ನಿದ್ದೆಗೆಡಿಸಿವೆ.

ಆಗಸ್ಟ್ 7ರಂದು ಉಡುಪಿಯ ಮುದರಂಗಡಿಯಲ್ಲಿ ನಡೆದ ಉದ್ಯಮಿ ಡೇವಿಡ್ ಶೂಟೌಟ್ ಪ್ರಕರಣ. ಈ ಘಟನೆ ನಡೆದ ಬೆನ್ನಲ್ಲೇ ಭೂಗತ ಲೋಕದ ನೆರಳು ಕರಾವಳಿಯ ಮೇಲೆ ಮತ್ತೆ ಬಿದ್ದಿದೆಯಾ ಅನ್ನೋ ಶಂಕೆ ವ್ಯಕ್ತವಾಗಿದೆ.

ಡೇವಿಡ್ ಹತ್ಯೆಯ ಬಳಿಕ ಶೂಟರ್ ರಾಜು, ಭೂಗತ ಪಾತಕಿಯ ಜೊತೆ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ರೆಕಾರ್ಡಿಂಗ್‌ ಲಭ್ಯವಾಗಿದೆ. 'ನಿನ್ನ ಹಣ ನಿನಗೆ ತಲುಪುತ್ತದೆ, ನೀನು ಸುರಕ್ಷಿತ ಜಾಗ ನೋಡಿ ಅಡಗಿಕೋ' ಎಂಬ ಸಂಭಾಷಣೆ ಅದಲ್ಲಿದೆ.

ಅಷ್ಟೇ ಅಲ್ಲ, ಘಟನೆ ನಂತರ ಕರಾವಳಿಯ ಹೋಟೆಲ್ ಉದ್ಯಮಿಯೊಬ್ಬರಿಗೆ ಕರೆ ಮಾಡಿದ್ದ ವ್ಯಕ್ತಿ 'ಮೈ HP ಬೋಲ್ ರಹಾ ಹೂಂ' ಎಂದು ಬೆದರಿಕೆ ಹಾಕಿದ್ದಾನೆ. ಈ ಆಡಿಯೋಗಳು ಕರಾವಳಿ ಭಾಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿವೆ."

HP ಅಲಿಯಾಸ್ ಹೇಮಂತ್ ಪೂಜಾರಿ ಯಾರು?

ಮುಂಬೈನ ಘಾಟ್‌ಕೋಪರ್‌ನ ಹೋಟೆಲೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. 1999ರಲ್ಲಿ ಛೋಟಾ ರಾಜನ್ ಗ್ಯಾಂಗ್ ಮೂಲಕ ಪ್ರಮುಖ ಶೂಟರ್ ಆಗಿ ಗುರುತಿಸಿಕೊಂಡಿದ್ದ ಹೇಮಂತ್ ಪೂಜಾರಿ, 2011ರಲ್ಲಿ ಕೇಕ್ ಅಂಗಡಿ ಮಾಲೀಕ ಅಂಗಾರ ಪೂಜಾರಿಯ ಹತ್ಯೆಯ ನಂತರ ಸೈಲೆಂಟ್ ಆಗಿದ್ದ.

2013ರ ವೇಳೆಗೆ ಈತ ತೀರಿಕೊಂಡಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಮುದರಂಗಡಿ ಶೂಟೌಟ್ ಹಾಗೂ ಉದ್ಯಮಿಗಳಿಗೆ ಬಂದಿರುವ ಹಫ್ತಾ ಬೆದರಿಕೆ ಕರೆಗಳು ಈತ ಮತ್ತೆ ಸಕ್ರಿಯನಾಗಿದ್ದಾನೆಯೇ ಎಂಬ ಅನುಮಾನ ಮೂಡಿಸಿವೆ.

ಸದ್ಯ ಲಭ್ಯವಿರುವ ಆಡಿಯೋದಲ್ಲಿರುವುದು ನಿಜಕ್ಕೂ ಹೇಮಂತ್ ಪೂಜಾರಿಯ ಧ್ವನಿಯೇ ಅಥವಾ ಆತನ ಹೆಸರು ಬಳಸಿ ಬೇರೆ ಯಾರಾದರೂ ಬೆದರಿಕೆ ಹಾಕುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಮುಂದಾಗಿದ್ದಾರೆ."

"2013ರಲ್ಲೇ ಸತ್ತಿದ್ದಾನೆ ಎನ್ನಲಾಗಿದ್ದ ಪಾತಕಿ ನಿಜಕ್ಕೂ ಜೀವಂತವಾಗಿದ್ದಾನಾ? ಅಥವಾ ಆತನ ಹೆಸರಿನಲ್ಲಿ ಶೂಟರ್‌ಗಳು ಈ ಕೃತ್ಯ ಎಸಗಿದ್ದಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸರ ಅಧಿಕೃತ ತನಿಖೆಯ ವರದಿ ಬಂದ ಮೇಲಷ್ಟೇ ಉತ್ತರ ಸಿಗಬೇಕಿದೆ.

Topics

ಸಂಬಂಧಿತ ಸುದ್ದಿಗಳು