ಮಂಗಳೂರು-ಕುವೈತ್​ ವಿಮಾನ ಸಂಚಾರ 6 ತಿಂಗಳಿಂದ ಸ್ಥಗಿತ : ಪ್ರಯಾಣಿಕರಿಗೆ ಸಂಕಷ್ಟ

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕಾಸರಗೋಡು ಜಿಲ್ಲೆಗಳ ಸಾವಿರಾರು ಕುಟುಂಬಗಳು ಜೀವನೋಪಾಯಕ್ಕಾಗಿ ಕುವೈತ್ ದೇಶವನ್ನು ಅವಲಂಬಿಸಿವೆ.

By ರಶ್ಮಿ ಎಸ್. | Rashmi S

1 min read

WhatsAppPost
mangaluru kuwait flight services suspended 6 months
mangaluru kuwait flight services suspended 6 months

ಕರಾವಳಿ ಭಾಗದಿಂದ ಉದ್ಯೋಗ ಹಾಗೂ ವ್ಯಾಪಾರ ನಿಮಿತ್ತ ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರಿಗೆ ತೀವ್ರ ಹಿನ್ನಡೆಯಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುವೈಟ್‌ಗೆ ಕಾರ್ಯಾಚರಣೆ ನಡೆಸುತ್ತಿದ್ದ ನೇರ ವಿಮಾನ ಸೇವೆಗಳು ಕಳೆದ ಆರು ತಿಂಗಳುಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕಾಸರಗೋಡು ಜಿಲ್ಲೆಗಳ ಸಾವಿರಾರು ಕುಟುಂಬಗಳು ಜೀವನೋಪಾಯಕ್ಕಾಗಿ ಕುವೈತ್ ದೇಶವನ್ನು ಅವಲಂಬಿಸಿವೆ. ಈ ಹಿಂದೆ ಲಭ್ಯವಿದ್ದ ನೇರ ವಿಮಾನ ಸೌಕರ್ಯವು ಕರಾವಳಿಯ ಜನರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ತಾಯ್ನಾಡಿಗೆ ಬಂದು ಹೋಗಲು ಸಹಕಾರಿಯಾಗಿತ್ತು. ಆದರೆ ಅರ್ಧ ವರ್ಷದಿಂದ ಈ ಸೇವೆ ಸ್ಥಗಿತಗೊಂಡಿರುವುದರಿಂದ, ಅನಿವಾಸಿ ಕನ್ನಡಿಗರು ಅನಿವಾರ್ಯವಾಗಿ ಮುಂಬೈ ಅಥವಾ ಬೆಂಗಳೂರು ಮಾರ್ಗದ ಮೂಲಕ ಕನೆಕ್ಟಿಂಗ್ ವಿಮಾನಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೇವಲ ನಾಲ್ಕೈದು ಗಂಟೆಗಳಲ್ಲಿ ತಲುಪಬೇಕಾಗಿದ್ದ ಪ್ರಯಾಣದ ಅವಧಿ ಈಗ ದುಪ್ಪಟ್ಟಾಗಿದೆ.

ವಿಮಾನಗಳ ಕೊರತೆ ಮತ್ತು ಕನೆಕ್ಟಿಂಗ್ ಫ್ಲೈಟ್‌ಗಳ ಅನಿವಾರ್ಯತೆಯಿಂದಾಗಿ ಟಿಕೆಟ್ ದರಗಳು ಕೂಡ ಗಗನಕ್ಕೇರಿವೆ. ಇದು ಸಾಮಾನ್ಯ ಕಾರ್ಮಿಕ ವರ್ಗದವರ ಬಜೆಟ್‌ಗೆ ಭಾರಿ ಹೊಡೆತ ನೀಡಿದೆ. ತುರ್ತು ಸಂದರ್ಭಗಳಲ್ಲಿ ಅಥವಾ ಹಬ್ಬ ಹರಿದಿನಗಳ ರಜೆಗೆ ಊರಿಗೆ ಬರಲು ಯೋಜಿಸುವವರಿಗೆ ಸೀಟುಗಳು ಸಿಗದೆ ಪರದಾಡುವಂತಾಗಿದೆ.

ವ್ಯಾಪಾರ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದಲೂ ಈ ಮಾರ್ಗ ಅತ್ಯಂತ ಲಾಭದಾಯಕವಾಗಿತ್ತು. ಆದಷ್ಟು ಬೇಗ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಮಂಗಳೂರು-ಕುವೈಟ್ ನಡುವಿನ ನೇರ ವಿಮಾನಯಾನವನ್ನು ಪುನರಾರಂಭಿಸಬೇಕು ಎಂದು ಅನಿವಾಸಿ ಭಾರತೀಯರ ಸಂಘಟನೆಗಳು ಒಕ್ಕೊರಲಿನಿಂದ ಒತ್ತಾಯಿಸಿವೆ.

Topics

ಸಂಬಂಧಿತ ಸುದ್ದಿಗಳು