Kannada News Next

religion

ನವರಾತ್ರಿ ಏಳನೇ ದಿನ : ದುಷ್ಟಶಕ್ತಿ ನಾಶಮಾಡುವ ಕಾಳರಾತ್ರಿ ದೇವಿಯನ್ನು ಪೂಜಿಸುವ ದಿನ

ದುಷ್ಟಶಕ್ತಿಯನ್ನು ನಾಶಮಾಡುವ ಕಾಳರಾತ್ರಿ ದೇವಿಯು ಭಕ್ತರಲ್ಲಿರುವ ಬೆಂಕಿ, ನೀರು, ಪ್ರಾಣಿ ಮತ್ತು ಶತ್ರುಗಳ ಭಯವನ್ನು ನಿವಾರಿಸುತ್ತಾಳೆ.

By Archana V Bhat | ಅರ್ಚನಾ ವಿ ಭಟ್‌
Navaratri Day 7 Kalaratri Devi

ಇಂದು ಶರನ್‌ ನವರಾತ್ರಿಯ 7ನೇ ದಿನ. ಆಶ್ವೀಜ ಮಾಸದ ಸಪ್ತಮಿ ತಿಥಿ ಅಕ್ಟೋಬರ್‌ 17 ರಂದು ದುರ್ಗಾ ದೇವಿಯ 7ನೇ ರೂಪವಾದ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿ ದೇವಿಯು ದುಷ್ಟ ಶಕ್ತಿಗಳನ್ನು ನಾಶಮಾಡುವ ದೇವತೆ. ದೇವಿಯನ್ನು ನವರಾತ್ರಿಯ ಸಮಯದಲ್ಲಿ ಪೂಜಿಸುವುದರಿಂದ ಬೆಂಕಿ, ನೀರು, ಪ್ರಾಣಿ ಮತ್ತು ಶತ್ರುಗಳ ಭಯವಿರುವುದಿಲ್ಲ. ಜೀವನದಲ್ಲಿರುವ ಅನೇಕ ತೊಂದರೆಗಳನ್ನು ಸಹ ಕಾಳರಾತ್ರಿ ದೇವಿಯು ದೂರಮಾಡುತ್ತಾಳೆ.

ನವರಾತ್ರಿ 7ನೇ ದಿನ

ದಿನಾಂಕ : ಅಕ್ಟೋಬರ್‌ 17, 2026

ನವರಾತ್ರಿ ದಿನ : ಏಳನೇ ದಿನ

ಪೂಜಿಸುವ ದೇವಿ : ಕಾಳರಾತ್ರಿ ದೇವಿ

ಮಹತ್ವ : ಬೆಂಕಿ, ನೀರು, ಪ್ರಾಣಿ ಮತ್ತು ಶತ್ರುಗಳ ಭಯ ನಿವಾರಿಸುವ ದೇವಿ

ಬಣ್ಣ : ಬೂದು

ನೈವೇದ್ಯ : ಬೆಲ್ಲದಿಂದ ತಯಾರಿಸಿದ ಸಿಹಿ

ಕಾಳರಾತ್ರಿ ದೇವಿಯ ರೂಪ ಮತ್ತು ಪುರಾಣ ಕಥೆ

ನವರಾತ್ರಿಯ ಏಳನೇ ದಿನವಾದ ಮಹಾಸಪ್ತವಿಯಣದು ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಪುರಾಣ ಕಥೆಗಳ ಪ್ರಕಾರ ಆದಿಶಕ್ತಿಯು ಅಸುರರಾದ ಶುಂಭ ಮತ್ತು ನಿಶುಂಭರನ್ನು ಸಂಹಾರ ಮಾಡಲು ಕಾಳರಾತ್ರಿಯ ರೂಪವನ್ನು ಧರಿಸಿದಳು. ಕಾಳರಾತ್ರಿಯು ದೇವಿಯ ಭಯಂಕರ ರೂಪವಾಗಿದೆ. ದೇವಿಯು ಕಪ್ಪು ಬಣ್ಣವನ್ನು ಹೊಂದಿದ್ದು ಅವಳ ಕೂದಲು ಎಲ್ಲಾ ದಿಕ್ಕುಗಳಲ್ಲಿಯೂ ಹರಡಿಕೊಂಡಿದೆ. ದೇವಿಗೆ 4 ಕೈಗಳಿದ್ದು, 3 ಕಣ್ಣನ್ನು ಹೊಂದಿದ್ದಾಳೆ. ದೇವಿಯ ಈ ರೂಪವು ಶಿವನ ರುದ್ರ ರೂಪವನ್ನು ನೆನಪಿಸುತ್ತದೆ. ಅವಳ ಕಣ್ಣು ಬೆಂಕಿಯನ್ನು ಉಗುಳುತ್ತಿದ್ದು ಬಲ ಭಾಗದ ಮೇಲಿನ ಕೈ ವರದ ಮುದ್ರೆಯನ್ನು ಹಾಗೂ ಬಲಭಾಗದ ಕೆಳಗಿನ ಕೈ ಅಭಯ ಮುದ್ರೆಯನ್ನು ಹೊಂದಿದೆ. ಕಾಳರಾತ್ರಿಗೆ ಶಿವನಂತೆ ಮೂರು ಕಣ್ಣುಗಳಿವೆ. ಕಾಳರಾತ್ರಿ ದೇವಿಯು ದುಷ್ಟಶಕ್ತಿಗಳನ್ನು ನಾಶಮಾಡುವ ಶುಭಂಕರಿ ಎಂದೂ ಕರೆಯುತ್ತಾರೆ.