ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸೋಮವಾರ ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿಯ (Men's Selection Committee) ಅಧ್ಯಕ್ಷರಾಗಿ ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ನೇಮಕ ಮಾಡಿದೆ.
ಇದೇ ವೇಳೆ, ಮಾಜಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಿರ್ಗಮನದ ಬಳಿಕ ಖಾಲಿಯಾಗಿದ್ದ ಸ್ಥಾನಕ್ಕೆ ಭಾರತದ ಮಾಜಿ ಆಲ್ರೌಂಡರ್ ರಮೇಶ್ ಪವಾರ್ ಅವರನ್ನು ಐವರು ಸದಸ್ಯರ ಆಯ್ಕೆ ಸಮಿತಿಗೆ ಹೊಸ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಈ ನೇಮಕಾತಿಯೊಂದಿಗೆ ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನಾಯಕತ್ವಕ್ಕೆ ಇದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಬಿಸಿಸಿಐ ನಿಗದಿಪಡಿಸಿರುವ ನಿಯಮದಂತೆ ಟೆಸ್ಟ್ ಕ್ರಿಕೆಟ್ ಅನುಭವದ ಆಧಾರದ ಮೇಲೆ ಪ್ರಗ್ಯಾನ್ ಓಜಾ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆಯ್ಕೆ ಸಮಿತಿಯಲ್ಲಿ ಶಿವಸುಂದರ್ ದಾಸ್, ಆರ್.ಪಿ. ಸಿಂಗ್ ಹಾಗೂ ಅಜಯ್ ರಾತ್ರಾ ಈಗಾಗಲೇ ಸದಸ್ಯರಾಗಿದ್ದಾರೆ.
ಕ್ರಿಕೆಟ್ ಸಲಹಾ ಸಮಿತಿಯಿಂದ ರಮೇಶ್ ಪವಾರ್ ಆಯ್ಕೆ:
ಕ್ರಿಕೆಟ್ ಸಲಹಾ ಸಮಿತಿ (CAC) ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ರಮೇಶ್ ಪವಾರ್ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ. ಅಶೋಕ್ ಮಲ್ಹೋತ್ರಾ ಹಾಗೂ ಜತಿನ್ ಪರಾಂಜಪೆ ಸದಸ್ಯರಾಗಿದ್ದ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಸಿತ್ತು. ಬಳಿಕ ಪವಾರ್ ಅವರ ಹೆಸರನ್ನು ಏಕಮತದಿಂದ ಶಿಫಾರಸು ಮಾಡಲಾಗಿದ್ದು, ಬಿಸಿಸಿಐ ಅದನ್ನು ಅನುಮೋದಿಸಿದೆ.
ಅಜಿತ್ ಅಗರ್ಕರ್ ಅವರ ಅವಧಿ ಮುಗಿದ ಬಳಿಕ ಹೊಸ ಅಧ್ಯಕ್ಷರಾಗಿ ಯಾರು ನೇಮಕವಾಗಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಹುದ್ದೆಗೆ ಭಾರತದ ಮಾಜಿ ಆರಂಭಿಕ ಬ್ಯಾಟರ್ ವಸೀಂ ಜಾಫರ್ ಕೂಡ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿತ್ತು.
ವಸೀಂ ಜಾಫರ್ 31 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಪ್ರಗ್ಯಾನ್ ಓಜಾ 24 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಬಿಸಿಸಿಐ ತನ್ನ ನಿಯಮಾವಳಿಯ ಪ್ರಕಾರ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹಿರಿಯತ್ವವನ್ನು ಟೆಸ್ಟ್ ಕ್ರಿಕೆಟ್ ಅನುಭವ ಹಾಗೂ ಆಯ್ಕೆ ಸಮಿತಿಯಲ್ಲಿನ ಸ್ಥಾನಮಾನ ಸೇರಿದಂತೆ ನಿಗದಿತ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಿದ್ದು, ಅಂತಿಮವಾಗಿ ಓಜಾ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದೆ.
ಎಡಗೈ ಸ್ಪಿನ್ನರ್ ಆಗಿದ್ದ ಪ್ರಗ್ಯಾನ್ ಓಜಾ ಭಾರತ ಪರ 24 ಟೆಸ್ಟ್, 18 ಏಕದಿನ ಹಾಗೂ 6 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 113 ವಿಕೆಟ್ಗಳನ್ನು ಕಬಳಿಸಿರುವ ಅವರು, ಹಲವು ವರ್ಷಗಳ ಕಾಲ ಭಾರತದ ಪ್ರಮುಖ ಸ್ಪಿನ್ನರ್ ಆಗಿದ್ದರು. ಈಗ ಅವರು ಎಲ್ಲಾ ಮಾದರಿಗಳಲ್ಲೂ ಭಾರತ ಪುರುಷರ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿಯಿರುವ ಸಮಿತಿಗೆ ನೇತೃತ್ವ ವಹಿಸಲಿದ್ದಾರೆ.
ರಮೇಶ್ ಪವಾರ್ ಭಾರತ ಪರ 2 ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳಲ್ಲಿ ಆಡಿದ ಬಳಿಕ ತರಬೇತುದಾರರಾಗಿ ತಮ್ಮ ವೃತ್ತಿಜೀವನ ಮುಂದುವರಿಸಿದ್ದರು. ಅವರು ಭಾರತ ಮಹಿಳಾ ತಂಡ, ಮುಂಬೈ ಹಾಗೂ ಗುಜರಾತ್ ತಂಡಗಳಿಗೆ ತರಬೇತಿ ನೀಡಿರುವ ಅನುಭವ ಹೊಂದಿದ್ದು, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಆಗಿದ್ದ ಅವಧಿಯಲ್ಲಿ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಲ್ಲದೆ, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.
ಅವರ ಕೋಚಿಂಗ್ ಅನುಭವ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಹಿನ್ನೆಲೆ ಭಾರತೀಯ ಪುರುಷರ ಆಯ್ಕೆ ಸಮಿತಿಗೆ ಮಹತ್ವದ ಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ರಮೇಶ್ ಪವಾರ್ ಅವರ ಸೇರ್ಪಡೆಯೊಂದಿಗೆ ಬಿಸಿಸಿಐಯ ಐವರು ಸದಸ್ಯರ ಪುರುಷರ ಆಯ್ಕೆ ಸಮಿತಿ ಈಗ ಸಂಪೂರ್ಣಗೊಂಡಿದ್ದು, ಎಲ್ಲಾ ಮಾದರಿಗಳಲ್ಲಿ ಭಾರತ ಪುರುಷರ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಲಿದೆ.