CWG 2026: ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಪ್ರೀತಿ ಪನ್ವಾರ್!

ಕಾಮನ್‌ವೆಲ್ತ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತದ ಹೆಮ್ಮೆಯ ಬಾಕ್ಸರ್ ಪ್ರೀತಿ ಪನ್ವಾರ್ (Preeti Pawar) ದೇಶಕ್ಕೆ ಬಾಕ್ಸಿಂಗ್ ವಿಭಾಗದಲ್ಲಿ ಹೆಮ್ಮೆಯ ಚಿನ್ನದ ಪದಕಗೆದ್ದುಕೊಟ್ಟಿದ್ದಾರೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Preeti Pawar 1
Preeti Pawar 1

ಕಾಮನ್ವೆಲ್ತ್ ಗೇಮ್ಸ್ 2026 ಕ್ರೀಡಾಕೂಟದಲ್ಲಿ ಭಾರತದ ಹೆಮ್ಮೆಯ ಬಾಕ್ಸರ್ ಪ್ರೀತಿ ಪನ್ವಾರ್ (Preeti Pawar) ದೇಶಕ್ಕೆ ಬಾಕ್ಸಿಂಗ್ ವಿಭಾಗದಲ್ಲಿ ಹೆಮ್ಮೆಯ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಮಹಿಳಾ ಬಾಕ್ಸಿಂಗ್ 54 ಕೆಜಿ ತೂಕ ವಿಭಾಗದ ಫೈನಲ್ನಲ್ಲಿ ಕೆನಡಾದ ಪ್ರಬಲ ಬಾಕ್ಸರ್ ಸ್ಕಾರ್ಲೆಟ್ ಡೆಲ್ಗಾಡೊ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ 22 ವರ್ಷದ ಪ್ರೀತಿ ಪನ್ವಾರ್, ಕೆನಡಾದ ಸ್ಕಾರ್ಲೆಟ್ ಸವನ್ನಾ ಡೆಲ್ಗಾಡೊ ವಿರುದ್ಧ 5-0 ಅಂತರದ ಏಕಪಕ್ಷೀಯ ಜಯ ಸಾಧಿಸಿದರು. ಪ್ರಸ್ತುತ ಏಷ್ಯನ್ ಚಾಂಪಿಯನ್ ಆಗಿರುವ ಪ್ರೀತಿ, ಈಗ ಕಾಮನ್ವೆಲ್ತ್ ಚಾಂಪಿಯನ್ ಪಟ್ಟವನ್ನೂ ಅಲಂಕರಿಸುವ ಮೂಲಕ ಬಾಕ್ಸಿಂಗ್ ರಿಂಗ್ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರಿಗೆ ಇದು ಮೊದಲ ಪದಕವಾಗಿದೆ.

ಹರಿಯಾಣದವರಾದ ಪ್ರೀತಿ ಪನ್ವಾರ್ ಅವರ ಕ್ರೀಡಾ ಹಿನ್ನೆಲೆ ಅತ್ಯಂತ ಪ್ರೇರಣಾದಾಯಕವಾಗಿದೆ. ಇವರ ತಂದೆ ಸೋಮವೀರ್ ಹರಿಯಾಣ ಪೊಲೀಸರಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಮಾಜಿ ಕಬಡ್ಡಿ ಆಟಗಾರರಾಗಿದ್ದಾರೆ. ತಾಯಿ ಶಾಮಿನಿ ದೇವಿ ಕೂಡ ಮಾಜಿ ಕ್ರೀಡಾಪಟು. ಪ್ರಸಿದ್ಧ 'ದಂಗಲ್' ಚಲನಚಿತ್ರ ಹಾಗೂ ಸಾಕ್ಷಿ ಮಲ್ಲಿಕ್ ಅವರ ಒಲಿಂಪಿಕ್ ಪದಕ ಗೆಲುವು ತಂದೆ ಸೋಮವೀರ್ ಅವರನ್ನು ಪ್ರಭಾವಿಸಿತ್ತು. ಮಗಳನ್ನು ಕ್ರೀಡೆಯಲ್ಲಿ ಮುಂದುವರಿಸಲು ಪೋಷಕರು ನೀಡಿದ ಪ್ರೋತ್ಸಾಹವೇ ಇಂದಿನ ದೊಡ್ಡ ಯಶಸ್ಸಿಗೆ ಕಾರಣ.

preethi pawar 2.webp

ತಮ್ಮ 14ನೇ ವಯಸ್ಸಿನಲ್ಲಿ ಬಾಕ್ಸಿಂಗ್ ತರಬೇತಿ ಆರಂಭಿಸಿದ ಪ್ರೀತಿ, ಸಾಲು ಸಾಲು ಪದಕಗಳನ್ನು ಬಾಚಿಕೊಂಡಿದ್ದಾರೆ:

  • 2021 ಖೇಲೋ ಇಂಡಿಯಾ ಯೂತ್ ಗೇಮ್ಸ್ - ಚಿನ್ನ

  • 2024 ಏಷ್ಯನ್ U-22 ಚಾಂಪಿಯನ್ಶಿಪ್ - ಚಿನ್ನ

  • 2025 ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್ - ಚಿನ್ನ

  • 2026 ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ - ಚಿನ್ನ

  • ಪ್ರಸ್ತುತ 2026 ಕಾಮನ್ವೆಲ್ತ್ ಗೇಮ್ಸ್ - ಚಿನ್ನ

ಯೂತ್ ಹಂತದಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದವರೆಗೆ ತಮ್ಮ ಶ್ರಮದಿಂದ ಬೆಳೆದುಬಂದಿರುವ ಪ್ರೀತಿ ಪನ್ವಾರ್, ಇದೀಗ ಕಾಮನ್ವೆಲ್ತ್ನಲ್ಲಿ ಚಿನ್ನ ಗೆದ್ದು ದೇಶದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

Topics